ಬೆಂಗಳೂರು: “ನೀವೇ ದೇವಸ್ಥಾನ ಕಟ್ಟಿ, ನೀವೆ ಪೂಜಾರಿಗಳಾಗಿ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಕಾಯಕಯೋಗಿ ಸಿದ್ದರಾಮೇಶ್ವರ ಜಯಂತಿ ಮತ್ತು ಸಿದ್ದರಾಮೇಶ್ವರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ” ಕಲ್ಲು ಒಡೆದು, ಗುಡಿ ಕಟ್ಟುವವರು ನೀವು, ವಿಗ್ರಹ ತರುವವರು ನೀವು, ಆದರೆ, ನಿಮಗೆ ಪೂಜೆಗೆ ಅವಕಾಶವಿಲ್ಲ. ಹಾಗಾಗಿ, ನೀವೇ ದೇವಸ್ಥಾನ ಕಟ್ಟಿಕೊಂಡು, ನೀವೇ ಪೂಜಾರಿಗಳಾಗಿ ಎಂದು ಹೇಳಿದ್ದಾರೆ
ಶೂದ್ರರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡದಿದ್ದಾಗ, ನಾರಾಯಣಗುರುಗಳು ಅವುಗಳನ್ನು ತಿರಸ್ಕರಿಸಿ, ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ಹೀಗಾಗಿ ಅದೇ ಮಾರ್ಗವನ್ನು ನೀವೂ ಅನುಸರಿಸಬೇಕು ಎಂದು ಹೇಳಿದ್ದಾರೆ.
ಯಾವ ಕೆಲಸವೂ ಮೇಲು ಅಲ್ಲ, ಕೀಳೂ ಅಲ್ಲ. ಈ ಕಾರಣಕ್ಕೇ ಕಾಯಕವೇ ಕೈಲಾಸ ಎಂದು ಶರಣರು ಹೇಳಿದ್ದಾರೆ. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ವಿತರಣೆ. ಎಲ್ಲರೂ ಉತ್ಪಾದನೆಯಲ್ಲಿ ಭಾಗವಹಿಸಬೇಕು, ಅದನ್ನು ಎಲ್ಲರಿಗೂ ವಿತರಿಸಬೇಕು ಎನ್ನುವುದು ಬಸವಾದಿ ಶರಣರ ಆಶಯವಾಗಿತ್ತು. ವೈಚಾರಿಕ – ವೈಜ್ಞಾನಿಕ ಸಮ ಸಮಾಜ ನಿರ್ಮಾಣಕ್ಕೆ ಬಸವಾದಿ ಶರಣರು ಹೋರಾಡಿದ್ದರು. ಶರಣರು ನುಡಿದಂತೆ ನಡೆದರು. ಹೇಳಿದಂತೆಯೇ ತಮ್ಮ ಬದುಕನ್ನು ಆಚರಿಸಿದರು ಎಂದು ಹೇಳಿದ್ದಾರೆ.