ನವದೆಹಲಿ: ಸೆಪ್ಟೆಂಬರ್ ತಿಂಗಳಲ್ಲಿ ಭಾರತ ಜಿ20 ಶೃಂಗಸಭೆಯ ಆತಿಥ್ಯ ವಹಿಸಿಕೊಳ್ಳಲಿದ್ದು, ಶೃಂಗಸಭೆ ಏರ್ಪಡುವ ದೆಹಲಿಯ ಪ್ರಗತಿ ಮೈದಾನದಲ್ಲಿ ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಸಮಾವೇಶ ಕೇಂದ್ರ(IECC) ಸಂಕೀರ್ಣ ಮತ್ತು ಮರು ಅಭಿವೃದ್ಧಿಗೊಂಡ ಭಾರತ ವ್ಯಾಪಾರ ಪ್ರಚಾರ ಸಂಸ್ಥೆ (ITPO) ಸಂಕೀರ್ಣವನ್ನು ಪ್ರಧಾನಿ ಮೋದಿ ಇಂದು ಬುಧವಾರ ಸಂಜೆ ಉದ್ಘಾಟಿಸಲಿದ್ದಾರೆ.
ಅದಕ್ಕೂ ಮುನ್ನ ಭಾರತೀಯ ಹಿಂದೂ ಧಾರ್ಮಿಕ ಸಂಪ್ರದಾಯದಂತೆ ಸಂಕೀರ್ಣದ ಉದ್ಘಾಟನೆಯ ಪೂಜೆ, ಹೋಮ ಹವನಗಳಲ್ಲಿ ಇಂದು ಬೆಳಗ್ಗೆ ಪ್ರಧಾನ ಮಂತ್ರಿ ಪಾಲ್ಗೊಂಡರು. ಐಇಸಿಸಿ ಸಂಕೀರ್ಣವು ವಿಶ್ವದಲ್ಲಿಯೇ ಪ್ರಮುಖ ಪ್ರದರ್ಶನ ಮತ್ತು ಸಮಾವೇಶ ಸಂಕೀರ್ಣ ಕೇಂದ್ರಗಳಲ್ಲಿ ಒಂದಾಗಿದೆ. ಸುಮಾರು 123 ಎಕರೆ ವಿಸ್ತೀರ್ಣದ ಕ್ಯಾಂಪಸ್ ಪ್ರದೇಶವನ್ನು ಹೊಂದಿರುವ ಈ ಸಂಕೀರ್ಣವನ್ನು ಕಟ್ಟಡ ಹಳೆಯದಾದ ನಂತರ ಅದರ ಗುಣಮಟ್ಟವನ್ನು ಕೂಲಂಕಷವಾಗಿ ಪರಿಶೀಲಿಸಿ ನಿರ್ಮಿಸಲಾಗಿದೆ. 2,700 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಭಾರತದ ಅತಿದೊಡ್ಡ ಸಭೆ, ಪ್ರೋತ್ಸಾಹ, ಸಮ್ಮೇಳನಗಳು ಮತ್ತು ಪ್ರದರ್ಶನಗಳ ತಾಣಗಳಾಗಿ ಅಭಿವೃದ್ಧಿಪಡಿಸಲಾಗಿದೆ.