ಕಠ್ಮಂಡು: ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸುವಂತೆ ಹಾಗೂ ರಾಜ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಒತ್ತಾಯಿಸಿ ನೇಪಾಳಿ ಕಾಂಗ್ರೆಸ್ ಪಕ್ಷ ಮತ್ತೆ ಬೇಡಿಕೆಯನ್ನು ಮುಂದಿಟ್ಟಿದೆ. ಈ ಹಿನ್ನೆಲೆ ನೇಪಾಳಿ ಕಾಂಗ್ರೆಸ್ ಪಕ್ಷವು ಕಠ್ಮಂಡುವಿನಲ್ಲಿ ಮೆರವಣಿಗೆ ನಡೆಸಿದೆ.
ನೇಪಾಳಿ ಕಾಂಗ್ರೆಸ್ ಪಕ್ಷವು ಪ್ರಧಾನಿ ಪುಷ್ಪ ಕಮಲ್ ದಹಲ್ ಅವರಿಗೆ 40 ಅಂಶಗಳ ಕಾರ್ಯಸೂಚಿಯನ್ನು ಸಲ್ಲಿಸಿದೆ. ಈ ಕುರಿತು ಮಾತನಾಡಿದ ರಾಷ್ಟ್ರೀಯ ಪ್ರಜಾತಂತ್ರ ಪಕ್ಷದ ಅಧ್ಯಕ್ಷ ರಾಜೇಂದ್ರ ಅವರು, ನಮ್ಮ ದೇಶವು ನಿರ್ಣಾಯಕ ಹಂತವನ್ನು ತಲುಪಿದೆ. ಆದ್ದರಿಂದ ನಮಗೆ ರಾಜಕೀಯ ಪಕ್ಷಗಳ ಮಧ್ಯೆ ಹೊಸ ತಿಳುವಳಿಕೆ ಹಾಗೂ ಒಪ್ಪಂದದ ಅವಶ್ಯಕತೆ ಇದೆ ಎಂದರು.
ಇನ್ನು ಈ ಬಗ್ಗೆ ಮಾತನಾಡಿದ ಪಕ್ಷದ ವಕ್ತಾರ ಮೋಹನ್ ಶ್ರೇಷ್ಠಾ ಅವರು, ನಾವು ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸಲು ಹಾಗೂ ರಾಜಪ್ರಭುತ್ವದ ಮರುಸ್ಥಾಪನೆಗೆ ಒತ್ತಾಯ ಮಾಡಿದ್ದೇವೆ. ಹಣದುಬ್ಬರವನ್ನು ಅಂತ್ಯಗೊಳಿಸಲು, ಜನರ ಜೀವನವನ್ನು ಸರಾಗ ಮಾಡಲು, ಫೆಡರಲ್ ರಚನೆಯನ್ನು ರದ್ದು ಮಾಡಲು, ಭ್ರಷ್ಟಾಚಾರ ನಿಯಂತ್ರಣ, ಉತ್ತಮ ಆಡಳಿತಕ್ಕೆ ಕರೆ ನೀಡಿದ್ದೇವೆ ಎಂದು ತಿಳಿಸಿದರು.
ನೇಪಾಳ ರಾಷ್ಟ್ರದ ಶೇಕಡ 81 ರಷ್ಟು ನಾಗರಿಕರು ಹಿಂದೂಗಳೇ ಆಗಿದ್ದಾರೆ. ಇತ್ತೀಚೆಗೆ ನಡೆದ ವಸಂತ ಪಂಚಮಿ ಆಚರಣೆಯ ವೇಳೆ ಎಲ್ಲಾ ವಿಧಿವಿಧಾನಗಳಲ್ಲಿ ಪ್ರಧಾನಿಯಿಂದ ರಾಷ್ಟ್ರಪತಿಗಳವರೆಗೆ ಪಾಲ್ಗೊಂಡಿದ್ದರು. ಈ ವೇಳೆ ಹಿಂದೂ ರಾಷ್ಟ್ರ ಮರುಸ್ಥಾಪನೆಯ ಕೂಗು ಕೇಳಿ ಬಂದಿದೆ.