ಹುಬ್ಬಳ್ಳಿ : ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡವು ದೋಷಾರೋಪ ಪಟ್ಟಿಯನ್ನು ಶೀಘ್ರದಲ್ಲಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ನಾಳೆ ನ್ಯಾಯಾಂಗ ಬಂಧನ ಅವಧಿ ಮುಗಿಯಲಿದ್ದು, ನಾಳೆ ವಿಚಾರಣೆ ಬಳಿಕ ಕೋರ್ಟ್ ಆದೇಶ ನೀಡಲಿದೆ. ಹೌದು, ಏಪ್ರಿಲ್ 18 ರಂದು ಬಿವಿಬಿ ಕಾಲೇಜಿನ ಆವರಣದಲ್ಲಿ ನೇಹಾ ಹಿರೇಮಠ ಹತ್ಯೆಯಾಗಿತ್ತು. ಇದಕ್ಕೆ ಸಂಬಂಧಿಸಿ ಆರೋಪಿ ಫಯಾಜ್‌ನನ್ನು ಪೊಲೀಸರು ಬಂಧಿಸಿದ್ದರು. ವಿದ್ಯಾರ್ಥಿ ಸಂಘಟನೆ ಸೇರಿದಂತೆ ಸಂಘ ಸಂಸ್ಥೆಗಳು ಹೋರಾಟ ನಡೆಸಿದ್ದವು. ಆರೋಪಿಗೆ ಕಠಿಣ ಶಿಕ್ಷೆ ನೀಡಿದರೆ ಸಾಲದು. ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಹಲವು ಸಂಘಟನೆಗಳು ಹೋರಾಟ ಮಾಡಿದ್ದವು. ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಮಾಣದಲ್ಲಿ ಚರ್ಚೆ ನಡೆದಿತ್ತು. ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರವು ಪ್ರಕರಣದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು ಸಿಐಡಿ ತಂಡವನ್ನು ನೇಮಕ ಮಾಡಿತ್ತು. ಆರೋಪಿಯನ್ನು ಆರು ದಿನಗಳ ಕಾಲ ವಶಕ್ಕೆ ಪಡೆದಿದ್ದ ಸಿಐಡಿ ತಂಡ ಕೊಲೆ ನಡೆದ ಸ್ಥಳ, ಚಾಕು ಖರೀದಿಸಿದ ಸ್ಥಳ, ಕ್ಯಾಂಪಸ್‌ನಲ್ಲಿ ದ್ವಿಚಕ್ರವಾಹನ ನಿಲ್ಲಿಸಿದ್ದ ಸ್ಥಳ ಸೇರಿದಂತೆ ಹಲವು ಕಡೆ ಆರೋಪಿ ಕರೆದೊಯ್ದು ಮಹಜರು ನಡೆಸಿದ್ದರು. ನೇಹಾಳ ಪೋಷಕರ ವಿಚಾರಣೆಯನ್ನೂ ನಡೆಸಿತ್ತು. ಹೀಗೆ ಎಲ್ಲ ಆಯಾಮಗಳೊಂದಿಗೆ ತನಿಖೆ ಕೈಗೊಂಡಿದ್ದ ಸಿಐಡಿ ತಂಡವು ಪ್ರಕರಣಕ್ಕೆ ಸಂಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. ಆರೋಪಿ ಫಯಾಜ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಮೇ 14ಕ್ಕೆ ನ್ಯಾಯಾಂಗ ಬಂಧನ ಅವಧಿ ಮುಗಿಯಲಿದೆ.