ಬೆಂಗಳೂರು: ನೇಹಾ ಹತ್ಯೆ ಪ್ರಕರಣವನ್ನು ಜನರು ಮೂರೋ ಆರೋ ತಿಂಗಳ ನಂತರ ಮರೆತ ಬಳಿಕ ಮುಚ್ಚಿ ಹಾಕಲು ಪ್ರಯತ್ನ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಕ್ಷೇಪಿಸಿದರು.
ಹುಬ್ಬಳ್ಳಿಯಲ್ಲಿ ಕಾಲೇಜ್ ಕ್ಯಾಂಪಸ್ ನಲ್ಲಿ ಇತ್ತೀಚೆಗೆ ಬರ್ಬರವಾಗಿ ಹತ್ಯೆಗೀಡಾದ ನೇಹಾ ಹಿರೇಮಠ ಅವರ ನಿವಾಸಕ್ಕೆ ಇಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಭೇಟಿ ನೀಡಿ, ನಿರಂಜನ ಹಿರೇಮಠ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ,
ಸಮರ್ಥ ಸಾಕ್ಷಿ ಬೇಕು. ದಾಖಲೆಗಳನ್ನು ಸರಿಯಾಗಿ ಸಂಗ್ರಹ ಮಾಡಬೇಕಿತ್ತು. ಕಳೆದ ಹತ್ತಾರು ದಿನಗಳಿಂದ ಆತನ ಜೊತೆ ಸಂಪರ್ಕದಲ್ಲಿದ್ದವರ ಫೋನ್ ಕರೆಗಳ ವಿವರ ಯಾಕೆ ಸಂಗ್ರಹಿಸಿಲ್ಲ? ಯಾಕೆ ಇದನ್ನು ಮಾಡಿಲ್ಲ? ಅವನು ಮಾದಕ ದ್ರವ್ಯ ಸೇವನೆ ಮಾಡಿದ್ದನೇ? ಬೇರೆ ಏನಾದರೂ ಲಿಂಕ್ ಇತ್ತೇ? ಕೆಎಫ್‍ಡಿ, ಪಿಎಫ್‍ಐನಂಥ ಸಮಾಜವಿರೋಧಿ ಸಂಘಟನೆ ಜೊತೆ ಸಂಪರ್ಕ ಇತ್ತೇ ಎಂದು ಮಾಹಿತಿ ಪಡೆಯಬೇಕಿತ್ತು ಎಂದು ಆಗ್ರಹಿಸಿದರು.
ಗೃಹ ಸಚಿವರು, ಪೊಲೀಸ್ ಇಲಾಖೆಗೆ ಸಾಮಾನ್ಯ ಜ್ಞಾನ ಇರಬೇಕು. ಇಂಥ ಕೊಲೆ ಆದಾಗ ಡಬಲ್ ಅಲರ್ಟ್ ಇರಬೇಕು. ತನಿಖೆ ಮಾಡುವವರು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಕೇಳಬೇಕಿತ್ತಲ್ಲವೇ? ಸಾಕ್ಷ್ಯಗಳನ್ನು ಸಂಗ್ರಹಿಸಬೇಕಿತ್ತಲ್ಲವೇ? ಕಾನೂನಿನಡಿ ಇರುವ ಕ್ರಮವನ್ನು ಯಾಕೆ ಕೈಗೊಂಡಿಲ್ಲ? ಆರೋಪಿಯನ್ನು ಜೈಲಿಗೆ (ಜುಡಿಷಿಯಲ್ ಕಸ್ಟಡಿ) ಕಳಿಸಿದ ಬಳಿಕ ಯಾರ್ಯಾರು ಭೇಟಿ ಮಾಡಿದ್ದರು? ಬಚಾವ್ ಮಾಡಲು ಸಲಹೆ ಕೊಟ್ಟಿರುವ ಸಾಧ್ಯತೆ ಇರಬಹುದಲ್ಲವೇ ಎಂದು ಕೇಳಿದರು.
ನೇಹಾ ಹತ್ಯೆ ಖಂಡಿಸಿ, ದೇಶ ಮಾತ್ರವಲ್ಲದೆ ಅಮೇರಿಕ, ಲಂಡನ್‍ನಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ. ನೇಹಾ ಹತ್ಯೆ ವಿಷಯದಲ್ಲಿ ಆರೋಪಿ ಬಚಾವ್ ಆಗಲು ಪೊಲೀಸ್ ಇಲಾಖೆ, ಸರಕಾರವೇ ಅವಕಾಶ ಮಾಡಿಕೊಟ್ಟಿದೆ ಎಂದು ನೇರವಾಗಿ ಆರೋಪಿಸಿದರು.
ಈ ಕೊಲೆ ಹಿಂದೆ ಯಾರಿದ್ದಾರೆ? ಕೊಲೆಗೆ ಬಳಸಿದ ಆಯುದ್ಧವನ್ನು ಎಲ್ಲಿಂದ ಖರೀದಿ ಮಾಡಲಾಗಿದೆ ಎಂಬ ಮಾಹಿತಿ ಸಂಗ್ರಹಿಸಬೇಕಿತ್ತು. ಇಡೀ ಕುಟುಂಬದ 20 ವರ್ಷಗಳ ಹಿನ್ನೆಲೆ ಏನು? ಅವರಿಗೆ ಯಾರ್ಯಾರ ಜೊತೆ ಸಂಪರ್ಕ ಇದೆ ಎಂಬ ಮಾಹಿತಿ ತಿಳಿಯಬೇಕಿತ್ತು ಎಂದು ತಿಳಿಸಿದರು.
ಇದೊಂದು ವಿಶೇಷ ಪ್ರಕರಣವಾಗಿದ್ದರೂ ಲವ್ ಜಿಹಾದ್ ಎಂದರೆ ತಮಗೆ ಕೆಟ್ಟ ಹೆಸರು ಬರಬಹುದೆಂದು, ಅದನ್ನು ತಪ್ಪಿಸಲು ಸರಕಾರವು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಿಲ್ಲ. ಹಾಗೂ ಆರೋಪಿಯನ್ನು ಕಸ್ಟಡಿಗೆ ಪಡೆದಿಲ್ಲ ಎಂದು ಆರೋಪಿಸಿದರು. ಸರಕಾರವು ನೊಂದ ಕುಟುಂಬವು ಸಿಬಿಐಗೆ ಕೊಡಿ ಎಂದರೆ ಕೊಡಬೇಕು. ಸಿಐಡಿಗೆ ಅಥವಾ ಎಸ್‍ಐಟಿಗೆ ಕೊಡಿ ಎಂದರೂ ಕೊಡಬೇಕಿತ್ತು. ಇದು ಸಾಮಾನ್ಯ ಜ್ಞಾನ ಎಂದು ತಿಳಿಸಿದರು.
ಕಾಲೇಜು ಕ್ಯಾಂಪಸ್‍ಗಳೂ ಸುರಕ್ಷಿತವಲ್ಲ; ಅಲ್ಲಿಯೂ ಕೂಡ ಮಕ್ಕಳ ಹತ್ಯೆ ಆಗಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ಇದು ಕಾಲೇಜು ಕ್ಯಾಂಪಸ್‍ನಲ್ಲಿ ಆದ ಇಂಥ ಮೊದಲ ದುರ್ಘಟನೆ ಎಂದು ಬೇಸರ ವ್ಯಕ್ತಪಡಿಸಿದರು. ಲವ್ ಜಿಹಾದ್‍ಗಾಗಿ ಈ ಘಟನೆ ಆಗಿದ್ದು, ರಾಜ್ಯವೇ ತಲೆತಗ್ಗಿಸುವ ಘಟನೆ ಇದೆಂದು ಆಕ್ಷೇಪಿಸಿದರು. ಈ ಸಂದರ್ಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಹಾಜರಿದ್ದರು.
 
				 
         
         
         
															 
                     
                     
                     
                     
                    


































 
    
    
        