ಬೆಂಗಳೂರು : ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಕುರಿತು ಹೇಳಿರುವ ಹೇಳಿಕೆಗೆ ಗೃಹ ಸಚಿವ ಜಿ. ಪರಮೇಶ್ವರ್ ವಿಷಾದ ವ್ಯಕ್ತಪಡಿಸಿದ್ದಾರೆ. ನನ್ನ ಹೇಳಿಕೆಯಿಂದ ಯಾರಿಗಾದರು ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ. ಹುಬ್ಬಳ್ಳಿಯ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ ಕುರಿತು ರಾಜ್ಯಾದ್ಯಂತ ಕಿಚ್ಚು ಹೆಚ್ಚಾಗಿದೆ. ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಬಿಜೆಪಿ ಕೂಡಾ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿ ಫಯಾಜ್‌ನಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ನೇಹಾ ಹಿರೇಮಠ ಆಘಾತಕಾರಿ ಕೊಲೆ ಘಟನೆಯನ್ನು ಖಂಡಿಸಿ ಮುಸ್ಲಿಮರು ಸೇರಿದಂತೆ ವಿವಿಧ ಸಂಘಟನೆಗಳು ಮತ್ತು ವಿವಿಧ ಸಮುದಾಯಗಳ ಸದಸ್ಯರು ಬೀದಿಗಿಳಿದು ಆರೋಪಿಗಳಿಗೆ ಮರಣದಂಡನೆ ವಿಧಿಸುವ ಮೂಲಕ ಪ್ರದೇಶದ ವಿವಿಧೆಡೆ ವ್ಯಾಪಕ ಪ್ರತಿಭಟನೆ ಮಾಡುತ್ತಿದ್ದಾರೆ. ಕೊಲೆಯಾದ ನೇಹಾ ಮತ್ತು ಆರೋಪಿ ಫಯಾಜ್ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ನೇಹಾ ಫಯಾಜ್ನಿಂದ ದೂರವಾಗಲು ಯತ್ನಿಸಿದ್ದಾಳೆ. ಇದರಿಂದ ಕೋಪಗೊಂಡ ಫಯಾಜ್ ಕೊಲೆ ಮಾಡಿದ್ದಾನೆ. ಇದರಲ್ಲಿ ಲವ್ ಜಿಹಾದ್ ಕಂಡು ಬಂದಿಲ್ಲ. ನನ್ನನ್ನು ಬಿಟ್ಟು ಬೇರೆಯವನನ್ನು ಮದುವೆ ಮಾಡಿಕೊಳ್ಳುತ್ತೀಯಾ ಎಂದು ಕೋಪದಲ್ಲಿ ಕೊಲೆ ಮಾಡಿದ್ದಾನೆ. ಇಂತಹ ಘಟನೆಗಳು ಆಕಸ್ಮಿಕವಾಗಿ ನಡೆಯುತ್ತವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದರು. ಗೃಹ ಸಚಿವರ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶಗಳು ಹೆಚ್ಚಾಗಿದ್ದವು. ನೇಹಾ ಕುಟುಂಬಸ್ಥರು ಸೇರಿದಂತೆ ತಂದೆ ನಿರಂಜನ್ ಹಿರೇಮಠ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದರು. ಗೃಹ ಸಚಿವರು ಹೇಳಿಕೆಗೆ ಕ್ಷಮೆ ಕೇಳದಿದ್ದರೆ ನೇಹಾ ಅಂತ್ಯ ಸಂಸ್ಕಾರ ಮಾಡೋದಿಲ್ಲ ಎಂದು ಪ್ರತಿಭಟನೆ ನಡಸಿದರು. ಅಷ್ಟೇ ಅಲ್ಲದೇ, ಅವರ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಈ ಘಟನೆ ಕುರಿತು ಇಂದು ವಿಷಾದ ವ್ಯಕ್ತಪಡಿಸಿರುವ ಗೃಹ ಸಚಿವ ಜಿ. ಪರಮೇಶ್ವರ್, ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಬೆಂಗಳೂರಿನ ನಿವಾಸದಲ್ಲಿ ಹೇಳಿದ್ದಾರೆ.