ಹುಬ್ಬಳ್ಳಿ: ಹುಬ್ಬಳಿಯ ನೇಹಾ ಹೀರೆಮಠ ಕೊಲೆ ಪ್ರಕರಣವನ್ನು ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಹಾಗೂ ಆರೋಪಿಗೆ ಘೋರ ಶಿಕ್ಷೆ ವಿಧಿಸಲು ಸಿಐಡಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನೇಹಾ ಕುಟುಂಬವನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಹಾ ಹತ್ಯೆಯನ್ನು ನಾನು ಈಗಾಗಲೇ ಖಂಡಿಸಿದ್ದೇನೆ. ಪ್ರಕರಣವನ್ನು ಈಗಾಗಲೇ ಸಿಐಡಿಗೆ ಕೊಟ್ಟಿದ್ದೇವೆ. ಇದಕ್ಕಾಗಿ ವಿಶೇಷ ನ್ಯಾಯಾಲಯ ಮಾಡಬೇಕು. ಕೊಲೆ ಆರೋಪಿಗೆ ಕಠಿಣವಾದ ಶಿಕ್ಷೆ ಕೊಡಿಸಬೇಕು. ಆರೋಪಿಗೆ ಘೋರ ಶಿಕ್ಷೆ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು.
ಬಿಜೆಪಿಯವರು ಯಾವುದಾದರೂ ಪ್ರಕರಣವನ್ನ ಸಿಬಿಐಗೆ ಕೊಟ್ಟಿದ್ದಾರಾ..? ಅಧಿಕಾರದಲ್ಲಿ ಇದ್ದಾಗ ಒಂದು ಪ್ರಕರಣ ಸಿಬಿಐಗೆ ಕೊಟ್ಟಿದ್ದಾರಾ..? ನಾನು ಅಧಿಕಾರದಲ್ಲಿರುವಾಗ ಅನೇಕ ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದೇನೆ. ಇದರಲ್ಲಿ ಬಿಜೆಪಿ ರಾಜಕೀಯ ಮಾಡಬಾರದು. ಇದನ್ನ ಬಿಜೆಪಿ ರಾಕೀಯವಾಗಿ ಬಳಸುವುದು ಸರಿಯಲ್ಲಾ ಎಂದು ಸಿಎಂ ಕಿಡಿಕಾರಿದರು.
ಕಾಂಗ್ರೆಸ್ ಜನರ ಆಸ್ತಿ ಕಿತ್ತುಕೊಳ್ಳುತ್ತಿದೆ ಎಂಬ ಮೋದಿ ಹೇಳಿಕೆ ಬಗ್ಗೆ ಮಾತನಾಡಿ, 15 ಲಕ್ಷ ಅಕೌಂಟ್‍ಗೆ ಹಾಕಿದ್ದಾರಾ.? 2 ಕೋಟಿ ಉದ್ಯೋಗ ಕೊಟ್ರಾ? ರೈತರ ಆದಾಯ ದುಪ್ಪಟ್ಟು ಮಾಡಿದ್ರಾ..? ಡಾಲರ್ ಬೆಲೆ, ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಿದ್ರಾ ಎಂದು ಸಿಎಂ ತಿರುಗೇಟು ನೀಡಿದರು.