ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣದಲ್ಲಿ ಕರ್ತವ್ಯ ಲೋಪದಡಿ ಸಿಪಿಐ ಅಮಾನತು ಮಾಡಲಾಗಿದ್ದ ಪ್ರಕರಣ ಕಣ್ಣುಂದೆ ಇರುವಾಗಲೆ, ಮಹಿಳೆಯೊಂದಿಗೆ ದುರ್ನಡತೆ ಆರೋಪದಡಿ ಪಿಎಸ್ಐ ಅಮಾನತ್ತಾದ ಘಟನೆ ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ನಡೆದಿದೆ.
ಮಹಿಳೆಯೋರ್ವಳಿಗೆ ಕಿರುಕುಳ ಆರೋಪದಡಿ ಮಹಿಳೆಯ ದೂರಿನ ಮೆರೆಗೆ ಸಂಕೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ನರಸಿಂಹರಾಜು ಜೆ. ಡಿ. ಅವರನ್ನು ಅಮಾನತು ಮಾಡಿ ಬೆಳಗಾವಿ ಜಿಲ್ಲಾ ಎಸ್‌ಪಿ ಭೀಮಾಶಂಕರ ಗುಳೇದ್ ಆದೇಶ ಹೊರಡಿಸಿದ್ದಾರೆ. ಕರ್ತವ್ಯ ಲೋಪ, ಅಶಿಸ್ತು ಹಾಗೂ ದುರ್ನಡೆಯನ್ನು ಆಧರಿಸಿ ಅವರನ್ನು ಅಮಾನತು ಮಾಡಲಾಗಿದೆ. ಸಂಕೇಶ್ವರ ಪೊಲೀಸ ಠಾಣೆಗೆ ತಮ್ಮ ಕೌಟುಂಬಿಕ ಸಮಸ್ಯೆ ಕುರಿತು ತಮ್ಮ ಪತಿಯ ವಿರುದ್ಧ ದೂರು ನೀಡಿದ್ದ ಮಹಿಳೆಗೆ ನ್ಯಾಯ ಕೊಡಿಸಬೇಕಿದ್ದ ಪೊಲೀಸ್ ಅಧಿಕಾರಿ ಪಿಎಸ್‌ಐ ನರಸಿಂಹರಾಜು ಜೆ.ಡಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.
ಅವಳ ದೂರವಾಣಿ ಸಂಖ್ಯೆ ಪಡೆದು ಅವಳ ಸಂಪರ್ಕ ಬೆಳೆಸಿ ಅವಳನ್ನ ಕರೆದುಕೊಂಡು ತಿರುಗಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪತಿ ಪತ್ನಿ ಕೌಟುಂಬಿಕ ಜಗಳದಲ್ಲಿ ನ್ಯಾಯ ಕೊಡಿಸಬೇಕಿದ್ದ ಪಿಎಸ್‌ಐ ಮಹಿಳೆಯ ಗಂಡನನ್ನೇ ಬೆದರಿಸಿದ್ದಾರೆ ಎಂದು ನೊಂದ ಮಹಿಳೆ ನ್ಯಾಯಕ್ಕಾಗಿ, ಪಿಎಸ್‌ಐ ಅವರ ವರ್ತನೆಗೆ ಬೆಸತ್ತ ಮಹಿಳೆ ನ್ಯಾಯ ಕೊಡಿಸುವಂತೆ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾಳೆ. ಮಹಿಳೆಯ ದೂರಿನನ್ವಯ ವಿಚಾರಣೆ ನಡೆಸಿದ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿಗಳು ಪಿಎಸ್‌ಐ ನರಸಿಂಹರಾಜು ಅವರನ್ನ ಕರ್ತವ್ಯ ಲೋಪ, ಮಹಿಳೆಯೊಂದಿಗೆ ದುರ್ನಡತೆ ಹಾಗೂ ಅಶಿಸ್ತು ಎಂದು ನರಸಿಂಹರಾಜು ಅವರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.