ನವದೆಹಲಿ: ಒಂದು ಕೈಯಲ್ಲಿ ತಕ್ಕಡಿ, ಮತ್ತೊಂದು ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದಿರುವ ನ್ಯಾಯದೇವತೆಯ ಕಣ್ಣಿಗೆ ಕಟ್ಟಿರುವ ಪಟ್ಟಿಯನ್ನು ತೆಗೆಯಲಾಗಿದೆ. ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರ ಗ್ರಂಥಾಲಯದಲ್ಲಿ ನ್ಯಾಯದೇವತೆಯ ಹೊಸ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ನ್ಯಾಯದೇವತೆಯ ಹೊಸ ಪ್ರತಿಮೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಖಡ್ಗ ಹಿಡಿದಿರುವ ಕೈಯಲ್ಲಿ ಸಂವಿಧಾನ ಪ್ರತಿಯನ್ನಿರಿಸಲಾಗಿದ್ದು, ಕಣ್ಣಿಗೆ ಕಟ್ಟಿರುವ ಪಟ್ಟಿಯನ್ನು ತೆಗೆಯಲಾಗಿದೆ ಎಂಬ ಬಗ್ಗೆ ವರದಿಯಾಗಿದೆ. ವಸಾಹತುಶಾಹಿ ಪರಂಪರೆಯನ್ನು ಕೈಬಿಟ್ಟು ಭಾರತ ಮುಂದುವರಿಯಬೇಕಾಗಿದೆ. ನ್ಯಾಯದೇವತೆ ಕುರುಡಳಲ್ಲ, ಅವಳು ಎಲ್ಲರನ್ನು ಸಮಾನವಾಗಿ ನೋಡುತ್ತಾಳೆ ಎಂಬ ಸಂದೇಶವನ್ನು ರವಾನಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಈ ಬದಲಾವಣೆಗೆ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ.
