ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಹಿಂದುಳಿದ ವರ್ಗ-1, 2ಎ, 3ಬಿ, ವರ್ಗಕ್ಕೆ ಸೇರಿದ ನಿರುದ್ಯೋಗಿ ಕಾನೂನು ಪದವೀಧರರನ್ನು ನ್ಯಾಯಾಂಗ ತರಬೇತಿ ಯೋಜನೆಯಡಿ 2024-25ನೇ ಸಾಲಿನಲ್ಲಿ ಆಯ್ಕೆ ಮಾಡಲು ಖಾಲಿ ಇರುವ 10 ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸಲು ಇರುವ ನಿಬಂಧನೆಗಳು: ಅಭ್ಯರ್ಥಿಯು ವರ್ಗ-1, 2ಎ, 3ಬಿ, ವರ್ಗಕ್ಕೆ ಸೇರಿದ ಅಭ್ಯರ್ಥಿಗಳಾಗಿರಬೇಕು. ಆಯ್ಕೆ ಮಾಡಲಾಗುವ ಒಟ್ಟಾರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಲ್ಲಿ ಶೇ.33.33 ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿಡಲಾಗುವುದು. ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕಕ್ಕೆ 2 ವರ್ಷದ ಒಳಗೆ ಅಭ್ಯರ್ಥಿಯು ಕಾನೂನು ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದು ಸಲ್ಲಿಸಬೇಕು. ಸರ್ಕಾರಿ ಆದೇಶದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ 2ಎ, 3ಎ, 3ಬಿ ವರ್ಗಗಳ (ಅಲ್ಪ ಸಂಖ್ಯಾತರ ಜಾತಿಗಳನ್ನು ಹೊರತುಪಡಿಸಿ) ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ವಾರ್ಷಿಕ ಆದಾಯ ರೂ. 2,50,000/- ಹಾಗೂ ಪ್ರವರ್ಗ-1 ಅಭ್ಯರ್ಥಿಗಳು ರೂ.3,50,00 ಗಳ ಆದಾಯ ಮೀರಿಬಾರದು.
ಈ ತರಬೇತಿಯು 4 ವರ್ಷಗಳಾಗಿದ್ದು, ತರಬೇತಿ ಅವಧಿಯಲ್ಲಿ ನಿಯಮಾನುಸಾರ ಭತ್ಯೆ ನೀಡಲಾಗುವುದು. ಆಯ್ಕೆಯನ್ನು ಜಿಲ್ಲಾ ಆಯ್ಕೆ ಸಮಿತಿ ಮೂಲಕ ನಡೆಸಲಾಗುವುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ನಿಗದಿಪಡಿಸಿದ ದಿನಾಂಕಕ್ಕೆ ಕನಿಷ್ಠ 38 ವರ್ಷ ಹಾಗೂ ಪ್ರವರ್ಗ-1ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಮೀರಿರಬಾರದು. ಅಭ್ಯರ್ಥಿಯು ಬಾರ್ ಕೌನ್ಸಿಲ್‍ನಲ್ಲಿ ಹೆಸರು ನೊಂದಾಯಿಸಿರಬೇಕು. ನೊಂದಾಯಿಸಿಲ್ಲದ ಪಕ್ಷದಲ್ಲಿ ಆಯ್ಕೆಯಾದ ತಕ್ಷಣ ನೊಂದಾಯಿಸದ ಹೊರತು ಶಿಷ್ಯವೇತನ ಪಾವತಿಯಾಗುವುದಿಲ್ಲ.
ಆಯ್ಕೆಯಾದ ಅಭ್ಯರ್ಥಿಗಳು ಸುಳ್ಳು ಜಾತಿ, ಆದಾಯ ಪ್ರಮಾಣ ಪತ್ರ ಅಥವಾ ಇತರೆ ಯಾವುದೇ ತಪ್ಪು ಮಾಹಿತಿಯನ್ನು ನೀಡಿ ಆಯ್ಕೆಯಾದ ಪಕ್ಷದಲ್ಲಿ ಅಂತವರನ್ನು ಶಿಕ್ಷೆಗೆ ಗುರಿಪಡಿಸುವುದಲ್ಲದೇ, ಶಿಷ್ಯ ವೇತನದ ಜೊತೆಗೆ ಶೇ.10ರ ಬಡ್ಡಿಯನ್ನು ಭೂ ಕಂದಾಯ ಬಾಕಿ ರೂಪದಲ್ಲಿ ವಸೂಲಿ ಮಾಡಲಾಗುವುದು. ಅಲ್ಲದೇ ತರಬೇತಿಯನ್ನು ಮಧ್ಯದಲ್ಲಿ ಬಿಟ್ಟಲ್ಲಿ ಇಲಾಖೆಯಿಂದ ಪಡೆದ ಶಿಷ್ಯವೇತನವನ್ನು ಹಿಂತಿರುಗಿಸಬೇಕಾಗುವುದು. ಅಭ್ಯರ್ಥಿಗಳು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್, ಸರ್ಕಾರಿ ವಕೀಲರು 20 ವರ್ಷಗಳಿಗೆ ಕಡಿಮೆ ಇಲ್ಲದಂತೆ ಸೇವೆ ಸಲ್ಲಿಸಿರುವ ವಕೀಲರ ಬಳಿ ತರಬೇತಿಗೆ ನಿಯೋಜಿಸಲಾಗುವುದು. ಅಪೂರ್ಣ ಅವಧಿ ಮೀರಿದ ತಪ್ಪು ಮಾಹಿತಿ ಅಥವಾ ನಿಗದಿತ ದಿನಾಂಕದ ನಂತರ ಸ್ವೀಕರಿಸಲಾದ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೆ ತಿರಸ್ಕರಿಸಲಾಗುವುದು. ಅರ್ಜಿದಾರರು ಬೇರೆ ಇಲಾಖೆಯಿಂದ ತರಬೇತಿ ಭತ್ಯೆ ಪಡೆಯುತ್ತಿದ್ದಲ್ಲಿ ಅರ್ಹರಿರುವುದಿಲ್ಲ. ಅರ್ಜಿದಾರರು ಸ್ಥಳೀಯ ಸಂಸ್ಥೆ ಹಾಗೂ ಸೊಸೈಟಿ, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಯಾವುದೇ ಸದಸ್ಯರಾಗಿದ್ದಲ್ಲಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಹಾಗೂ ನಿಗದಿತ ಅರ್ಜಿ ನಮೂನೆಗಳನ್ನು ಪಡೆಯಲು ನಗರದ ಸ್ಟೇಡಿಯಂ ರಸ್ತೆಯ ಡಿ.ದೇವರಜ ಅರಸು ಭವನದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.