ಚೆನ್ನೈ: ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಪೂರ್ವ ಘಟ್ಟದಲ್ಲಿರುವ ಜವ್ವಾಡು ಬೆಟ್ಟದ ನಿವಾಸಿ 23 ವರ್ಷದ ಶ್ರೀಪತಿ ಎಂಬ ಯುವತಿ ತಮಿಳುನಾಡು ರಾಜ್ಯದ ಮೊದಲ ಬುಡಕಟ್ಟು ಮಹಿಳಾ ಸಿವಿಲ್ ನ್ಯಾಯಾಧೀಶರಾಗಿ ಇತಿಹಾಸ ನಿರ್ಮಿಸಿದ್ದಾರೆ. ಇದಲ್ಲದೆ, ಶ್ರೀಪತಿ ಅವರು ತಮ್ಮ ಮಗಳಿಗೆ ಜನ್ಮ ನೀಡಿದ ಎರಡು ದಿನಗಳ ನಂತರ ತಮಿಳುನಾಡು ಸಿವಿಲ್ ನ್ಯಾಯಾಧೀಶರ ಪರೀಕ್ಷೆಗೆ ಹಾಜರಾಗಿದ್ದರು. ಇದು ಶ್ರೀಪತಿ ಅವರಿಗೆ ಕೇವಲ ವೈಯಕ್ತಿಕ ಸಾಧನೆಯಲ್ಲ. ಇದು ಅವರ ಬುಡಕಟ್ಟು ಸಮುದಾಯಕ್ಕೆ ಪ್ರಮುಖ ಹೆಮ್ಮೆಯನ್ನು ತರುವ ಸಾಧನೆಯಾಗಿದೆ. ಆದಿವಾಸಿ ಜನಾಂಗದ ವಿದ್ಯಾರ್ಥಿನಿ ಶ್ರೀಪತಿ ಅವರಿಗೆ ಶೈಕ್ಷಣಿಕ ಮಾರ್ಗದರ್ಶನ ನೀಡಿದ ಶಿಕ್ಷಕಿ ಮಹಾಲಕ್ಷ್ಮಿ ಫುಲ್ ಖುಷಿಯಾಗಿದ್ದಾರೆ. ‘ಸವಾಲುಗಳ ನಡುವೆ ಶ್ರೀಪತಿಯ ಸ್ಥೈರ್ಯ ಮತ್ತು ಬದ್ಧತೆ ಅವರನ್ನು ಇಂದಿನ ಸ್ಥಿತಿಗೆ ತಂದಿದೆ. ಅವಳು ಗರ್ಭಿಣಿಯಾಗಿದ್ದರೂ ಪರೀಕ್ಷೆಗೆ ಚೆನ್ನಾಗಿ ತಯಾರಿ ನಡೆಸುತ್ತಿದ್ದಳು. ಮತ್ತು ಪರೀಕ್ಷೆಯ ಸಮಯದಲ್ಲೇ ಆಕೆಗೆ ಹೆರಿಗೆ ದಿನಾಂಕ ನಿಗದಿಯಾಗಿತ್ತು. ಪರೀಕ್ಷೆಗೆ ಎರಡು ದಿನಗಳಿರುವಾಗ ಶ್ರೀಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ವೈದ್ಯಕೀಯ ಆರೈಕೆಯಲ್ಲಿರುವಾಗಲೇ, ಪರೀಕ್ಷೆ ಬರೆಯಲು ಚೆನ್ನೈನಿಂದ 200 ಕಿ.ಮೀ ಸಮೀಪವಿರುವ ತಿರುವಣ್ಣಾಮಲೈಗೆ ಪ್ರಯಾಣಿಸಿದಳು. ಆಕೆ ಈಗ ತನ್ನ ಧ್ಯೇಯವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾಳೆ’ ಎಂದು ಶಿಕ್ಷಕಿ ಮಹಾಲಕ್ಷ್ಮಿ ಹೇಳಿದ್ದಾರೆ. ಜವ್ವಾಡು ಬೆಟ್ಟದ ಪಕ್ಕದಲ್ಲಿರುವ ಬುಡಕಟ್ಟು ಜನಾಂಗದ ಕುಗ್ರಾಮವಾದ ಪುಲಿಯೂರಿನ ನಿವಾಸಿಯಾಗಿರುವ ವೆಂಕಟರಾಮನ್ ಅವರು ಮದುವೆಯ ನಂತರ ಪತ್ನಿಯನ್ನು ಕಾನೂನು ಪದವಿ ಓದಲು ಪ್ರೋತ್ಸಾಹಿಸಿದರು. ಮದುವೆಯ ನಂತರ ತನ್ನ ಆಸೆಗಳಿಗೆ ಅಡ್ಡಿಯಾಗಿ ನಿಲ್ಲದೆ ಗಂಡನೇ ದೊಡ್ಡ ಆಸರೆಯಾಗಿದ್ದರು ಎಂದು ಹೆಮ್ಮೆಯಿಂದ ಹೇಳುತ್ತಾರೆ ಶ್ರೀಪತಿ. ಇನ್ನು ಶ್ರೀಪತಿಯವರ ತಾಯಿಯೂ ದೊಡ್ಡ ಬಲವಾಗಿ ನಿಂತಿದ್ದರು. ಬಿಎ ಮತ್ತು ಎಲ್‌ಎಲ್‌ಬಿ (ಬಿಎಲ್) ವ್ಯಾಸಂಗ ಮಾಡಿರುವ ಶ್ರೀಪತಿ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೊದಲು ಆರು ತಿಂಗಳ ತರಬೇತಿಯನ್ನು ಪಡೆಯಬೇಕಿದೆ. TNPSC ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಶ್ರೀಪತಿ ಮಂಗಳವಾರ ಆಪ್ತ ಸ್ವಾಗತದ ನಡುವೆ ತನ್ನ ತವರು ಮನೆಗೆ ಮರಳಿದರು. ಅವರ ಸಾಧನೆಗೆ ಅಭಿನಂದಿಸಿ ಅವರನ್ನು ಆದಿವಾಸಿ ಗ್ರಾಮದ ಶಾಲಾ ಬಾಲಕರು, ಬಾಲಕಿಯರು, ಗ್ರಾಮಸ್ಥರು ಮೆರವಣಿಗೆಯಲ್ಲಿ ಕರೆತಂದು ಅಭಿನಂದಿಸಿದರು.