ರಾಯ್ ಪುರ/ಐಜ್ವಾಲ್: ಪಂಚರಾಜ್ಯ ಚುನಾವಣೆಗಳ ಪೈಕಿ ಇಂದು ಛತ್ತೀಸ್‌ಗಢ ಮತ್ತು ಮಿಜೋರಾಂನಲ್ಲಿ ಮೊದಲ ಹಂತ ಮತದಾನ ನಡೆಯುತ್ತಿದ್ದು, ಮತದಾರರು ಬೆಳಿಗ್ಗೆಯಿಂದಲೇ ಮತಗಟ್ಟೆಗಳಿಗೆ ಭೇಟಿ ನೀಡಿ ಮತ ಚಲಾವಣೆ ಮಾಡುತ್ತಿದ್ದಾರೆ.
ಭದ್ರತಾ ದೃಷ್ಟಿಯಿಂದ ಚುನಾವಣಾ ಆಯೋಗವು ಛತ್ತೀಸ್‌ಗಢದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಸಲು ನಿರ್ಧರಿಸಿದೆ. ಇಂದು ಛತ್ತೀಸ್‌ಗಢದಲ್ಲಿ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಗೆ ಮತದಾನ ಶುರುವಾಗಿದ್ದು, ಒಟ್ಟು 20 ಕ್ಷೇತ್ರಗಳ 223 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಇಂದು ನಿರ್ಧರಿಸಲಿದ್ದಾರೆ. ಇದಾದ ನಂತರ ನವೆಂಬರ್ 17 ರಂದು ಎರಡನೇ ಹಂತದಲ್ಲಿ 70 ಸ್ಥಾನಗಳಿಗೆ ಮತದಾನ ನಡೆಯಲಿದೆ. ಇಂದು ಬೆಳಗ್ಗೆ 7ರಿಂದ ಮಧ್ಯಾಹ್ನ 3ರವರೆಗೆ 10 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, 10 ಕ್ಷೇತ್ರಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.
ಅದೇ ರೀತಿ ಮಿಜೋರಾಂನ ಎಲ್ಲ 40 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು ಮತದಾರರು ಸರತಿ ಸಾಲಿನಲ್ಲಿ ನಿಂತು ಮತಗಳನ್ನು ಚಲಾಯಿಸುತ್ತಿದ್ದಾರೆ. ಮಿಜೋರಾಂನಲ್ಲಿ ಆಡಳಿತಾರೂಢ ಮಿಜೋ ನ್ಯಾಶನಲ್ ಫ್ರಂಟ್, ವಿಪಕ್ಷ ಜೊರಾಂ ಪೀಪಲ್ಸ್ ಫ್ರಂಟ್ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 18 ಮಹಿಳೆಯರು ಸೇರಿ 174 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
ಈ ವಿಧಾನಸಭಾ ಚುನಾವಣೆಗಳು ಕೇಂದ್ರದಲ್ಲಿ ಬಿಜೆಪಿ, ಹೊಸದಾಗಿ ರೂಪುಗೊಂಡ ವಿರೋಧ ಪಕ್ಷವಾದ ಇಂಡಿಯಾ ಬಣ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಅಗ್ನಿಪರೀಕ್ಷೆ ಎಂದು ಪರಿಗಣಿಸಲಾಗಿದೆ ಮತ್ತು ಇದರ ಫಲಿತಾಂಶವು ಮುಂಬರುವ 2024 ರ ಲೋಕಸಭಾ ಚುನಾವಣೆಯ ರೂಪುರೇಷೆ ಮೇಲೆ ಪ್ರಭಾವ ಬೀರುವುದು ಖಚಿತ ಎಂದು ತಿಳಿದು ಬಂದಿದೆ.