ಬೆಂಗಳೂರು: ನಾನು ಪಕ್ಷ ಬಿಡುವುದಿಲ್ಲ. ಬಿಜೆಪಿಯಲ್ಲೇ ಇದ್ದು ಶುದ್ದೀಕರಣದ ಕಡೆಗೆ ನಾನು ಗಮನ ನೀಡುತ್ತೇನೆ. ನನ್ನ ಮಕ್ಕಳಿಗೆ, ಕುಟುಂಬದವರಿಗೆ, ಸಂಬಂಧಿಕರಿಗೆ ಅಥವಾ ನನ್ನ ಚೇಲಾಗಳಿಗೆ ಇರುವಂತಹ ಪಕ್ಷ ಬಿಜೆಪಿಯಾಗಬಾರದು. ಬಿಜೆಪಿಯೊಳಗೆ ಶುದ್ದೀಕರಣ ಆಗುವ ತನಕ ವಿರಮಿಸುವುದಿಲ್ಲ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿವಿ ಸದಾನಂದ ಗೌಡ ಕಿಡಿನುಡಿಗಳನ್ನಾಡಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಡಿವಿಎಸ್ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ವದಂತಿಗಳ ಬಳಿಕ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ಬಿಜೆಪಿಯನ್ನು ಬಿಡುವುದಿಲ್ಲ. ಕಾಂಗ್ರೆಸ್‌ನಿಂದ ಆಹ್ವಾನ ಬಂದಿದ್ದು ನಿಜ. ಆದರೆ ನಾನು ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದೆ. ಆಗ ಮಾಜಿ ಸಿಎಂ, ಮಾಜಿ ಡಿಸಿಎಂ ಬಂದು ಮನವೊಲಿಸಿ ಮತ್ತೆ ಸ್ಪರ್ಧಿಸುವಂತೆ ವಿನಂತಿಸಿದರು. ಹಾಗಾಗಿ ಮತ್ತೆ ಸ್ಪರ್ಧೆಗೆ ಒಲವುತೋರಿದ್ದು. ನನ್ನನ್ನು ಅವಮಾನಿಸಿದವರು ಮುಂದೆ ಪಶ್ಚಾತ್ತಾಪ ಅನುಭವಿಸುತ್ತಾರೆ. ಸಹಿಸಿಕೊಳ್ಳುವವರಿಗೆ ತಾಳ್ಮೆ ಇದ್ದರೆ, ದುಃಖ ಕೊಟ್ಟವರು ಇದ್ದೂ ಸತ್ತಂತೆ ಎಂದು ತನ್ನನ್ನು ಅವಮಾನಿಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.