ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಅತ್ತಿಬೆಲೆ ಸಮೀಪ ಪಟಾಕಿ ಮಳಿಗೆಯಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಘಟನಾ ಸ್ಥಳಕ್ಕೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶನಿವಾರ ರಾತ್ರಿ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಪಟಾಕಿ ಮಳಿಗೆಯಲ್ಲಿ ನಡೆದ ಅವಘಡದಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ. ಮೃತರ ಕುಟುಂಬಕ್ಕೆ ಸರಕಾರದಿಂದ ತಲಾ 5 ಲಕ್ಷ ಪರಿಹಾರ ನೀಡಲಾಗುವುದು ಎಂದರು.
ಇನ್ನು ದುರಂತ ಸ್ಥಳದಲ್ಲಿ 20 ಮಂದಿ ಇದ್ದು ನಾಲ್ವರು ತಪ್ಪಿಸಿಕೊಂಡಿದ್ದಾರೆ. 13 ಮಂದಿಯ ಶವ ಪತ್ತೆಯಾಗಿದೆ. ಉಳಿದವರು ಏನಾದರೂ ಎಂದು ತನಿಖೆ ನಡೆಸಲಾಗುತ್ತಿದೆ. ದುರಂತದ ಬಗ್ಗೆ ಪೊಲೀಸರು ಕೂಲಂಕಷ ತನಿಖೆ ನಡೆಸುತ್ತಿದ್ದಾರೆ. ಮಾಲಕರು ಕೂಡ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.