ನವದೆಹಲಿ : ಬ್ಯಾಂಕಾಕ್‌ಗೆ ತೆರಳುತ್ತಿದ್ದ ಲುಫ್ತಾನ್ಸಾ ವಿಮಾನದಲ್ಲಿ ದಂಪತಿಗಳ ನಡುವೆ ಜಗಳ ನಡೆದ ಕಾರಣ ವಿಮಾನವನ್ನು ದೆಹಲಿಯಲ್ಲಿ ತುರ್ತು ಲ್ಯಾಂಡ್ ಮಾಡಿದ ಘಟನೆ ನಡೆದಿದೆ.
ಪ್ರಯಾಣಿಕರ ಅಶಿಸ್ತಿನ ಬಗ್ಗೆ ಪೈಲಟ್‌ಗಳು ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಎಚ್ಚರಿಕೆ ನೀಡಿದ ಬಳಿಕ ಮ್ಯೂನಿಚ್‌ನಿಂದ ಟೇಕ್ ಆಫ್ ಆಗಿದ್ದ ವಿಮಾನವು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಇಳಿಯಿತು.
ಜರ್ಮನಿಯ ವ್ಯಕ್ತಿ ಮತ್ತು ಆತನ ಥಾಯಿಲ್ಯಾಂಡ್ ಪತ್ನಿ ನಡುವೆ ಜಗಳ ಆರಂಭವಾಗಿದ್ದು, ಇದು ವಿಮಾನದಲ್ಲಿ ಜೋರಾಗಿ ವಾಗ್ವಾದಕ್ಕೆ ಕಾರಣವಾಯಿತು. ಪತಿಯ ವರ್ತನೆಯಿಂದ ತನಗೆ ಬೆದರಿಕೆ ಇದೆ ಎಂದು ಪತ್ನಿಯೂ ಪೈಲಟ್‌ನ ಸಹಾಯ ಕೇಳಿದ್ದಾಳೆ. ಸ್ವಲ್ಪ ಸಮಯದ ನಂತರ, ಲುಫ್ಥಾನ್ಸ ವಿಮಾನ ಸಂಖ್ಯೆ LH772 IGI ನಲ್ಲಿ ಇಳಿಯಲು ಅನುಮತಿ ಕೇಳಿದರು. ಮೊದಲು ಪಾಕಿಸ್ತಾನದ ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಮತಿ ಕೋರಿತ್ತು, ಪಾಕಿಸ್ತಾನ ನಿರಾಕರಿಸಿತು. ಬಳಿಕ ದೆಹಲಿಯಲ್ಲಿ ವಿಮಾನ ಲ್ಯಾಂಡ್ ಆದ ನಂತರ ಪತಿಯನ್ನು ವಿಮಾನದಿಂದ ಕೆಳಗಿಳಿಸಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಮೂಲಗಳು ತಿಳಿಸಿವೆ.