ಪತ್ನಿಯ ಹುಟ್ಟುಹಬ್ಬಕ್ಕೆ ಚಂದ್ರನ ಮೇಲಿನ ಜಾಗವನ್ನು ಉಡುಗೊರೆಯಾಗಿ ನೀಡಿದ ಪತಿ

ಕೋಲ್ಕತ್ತಾ: ಭಾರತ ಚಂದ್ರಯಾನ-3 ಯಶಸ್ಸಿನ ಬಳಿಕ ಬಾಹ್ಯಾಕಾಶ ಜಗತ್ತಿನಲ್ಲಿ ಹೊಸ ಇತಿಹಾಸವನ್ನು ಬರೆದಿದೆ. ಇಲ್ಲೊಬ್ಬರು ಚಂದ್ರನ ಮೇಲಿನ ತುಂಡು ಜಾಗವನ್ನು ತನ್ನ ಪತ್ನಿಗೆ ಉಡುಗೊರೆಯಾಗಿ ನೀಡಿ ಸುದ್ದಿಯಾಗಿದ್ದಾರೆ.!

ಪಶ್ಚಿಮ ಬಂಗಾಳದ ಜಾರ್‌ಗ್ರಾಮ್ ಜಿಲ್ಲೆಯ ಸಂಜಯ್ ಮಹತೋ ಎಂಬ ವ್ಯಕ್ತಿ ತನ್ನ ಪತ್ನಿಯ ಹುಟ್ಟುಹಬ್ಬಕ್ಕೆ ಚಂದ್ರನ ಮೇಲಿನ ತುಂಡು ಜಾಗವನ್ನು ಉಡುಗೊರೆಯಾಗಿ ನೀಡಿದ್ದಾರೆ.

“ಮದುವೆಯ ವೇಳೆ ನಾನು ಪತ್ನಿಗೆ ಚಂದ್ರನನ್ನು ತಂದುಕೊಡುತ್ತೇನೆ ಎಂದು ಪ್ರಾಮಿಸ್ ಮಾಡಿದ್ದೆ. ಈ ಮಾತು ಕೊಟ್ಟ ದಿನದಿಂದ ಅದನ್ನು ಪೂರ್ಣ ಮಾಡದೆ ಸುಮ್ಮನೆ ಇರಲು ನನಗೆ ಆಗುತ್ತಿರಲಿಲ್ಲ. ಈಗ ಮದುವೆಯ ಬಳಿಕ ಅವರ ಮೊದಲ ಹುಟ್ಟುಹಬ್ಬದಂದು ನಾನು ಚಂದ್ರನ ಮೇಲಿನ ತುಂಡು ಜಾಗವನ್ನು ಅವಳಿಗೆ ಯಾಕೆ ನೀಡಬಾರದೆಂದು ಯೋಚಿಸಿ. ನಾನು ಅವಳಿಗಾಗಿ ಉಡುಗೊರೆಯನ್ನು ನೀಡಿದ್ದೇನೆ” ಎಂದು ಸಂಜಯ್ ಮಹತೋ ಹೇಳಿದ್ದಾರೆ.

Advertisement

ತನ್ನ ಸ್ನೇಹಿತನ ಸಹಾಯದಿಂದ ಅವರು ಲೂನಾ ಸೊಸೈಟಿ ಇಂಟರ್ನ್ಯಾಷನಲ್ ಮೂಲಕ 10,000 ರೂಪಾಯಿ ಕೊಟ್ಟು ಒಂದು ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಚಂದ್ರನ ಮೇಲಿನ ಜಾಗದ ಖರೀದಿಯ ಪ್ರಕ್ರಿಯೆಗೆ ಒಂದು ವರ್ಷ ತಗುಲಿದೆ ಎಂದು ವರದಿ ತಿಳಿಸಿದೆ.

“ನಾನು ಅವಳಿಗಾಗಿ ಚಂದ್ರನ ಮೇಲೆ ಒಂದು ಎಕರೆ ಜಾಗವನ್ನು ತಂದಿದ್ದೇನೆ” ಎಂದು ಮಹತೋ, ತಮ್ಮ ಕೈಯಲ್ಲಿ ನೋಂದಣಿ ಪತ್ರವನ್ನು ಹಿಡಿದು ಹೇಳಿದ್ದಾರೆ. ಇದರಲ್ಲಿ’ಚಂದ್ರನ ಆಸ್ತಿಗಾಗಿ ನೋಂದಾಯಿತ ಹಕ್ಕು ಮತ್ತು ಪತ್ರ’ ಎಂದು ಬರೆಯಲಾಗಿದೆ.

“ಆ ಹಣದಲ್ಲಿ ಇನ್ನೇನಾದರೂ ತರಬಹುದಿತ್ತಲ್ವಾ ಎಂದು ಕೇಳಿದಾಗ, “ಹೌದು, ನಾನು ಬೇರೆ ಏನಾದರು ತರಬಹುದಿತ್ತು. ಆದರೆ ಚಂದ್ರನಿಗೆ ನಮ್ಮಿಬ್ಬರ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಆದ್ದರಿಂದ, ವಿವಾಹಿತ ದಂಪತಿಯಾಗಿ ಅವರ ಮೊದಲ ಹುಟ್ಟುಹಬ್ಬದಂದು ಇದಕ್ಕಿಂತ ಉತ್ತಮ ಉಡುಗೊರೆ ನೀಡುವ ಬಗ್ಗೆ ಯೋಚನೆ ಬಂದಿಲ್ಲ” ಎಂದು ಮಹತೋ ಹೇಳುತ್ತಾರೆ.

ನೀವು ದೈಹಿಕವಾಗಿ ಚಂದ್ರನಲ್ಲಿರಲು ಸಾಧ್ಯವಾಗಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಹಾಗೂ ನನ್ನ ಪತ್ನಿ ಅನಾಮಿಕ ತೋಟದಲ್ಲಿ ಕೂತು ಚಂದ್ರನನ್ನು ನೋಡಿ, ಚಂದ್ರನೊಂದಿಗಿನ ನಮ್ಮ ವಿಶೇಷ ನೆನಪನ್ನು ಸ್ಮರಿಸುತ್ತಾ ನಮ್ಮ ಪ್ರೇಮ ಕಥೆ ಬಗ್ಗೆ ಮಾತನಾಡುತ್ತೇವೆ” ಎಂದು ಸಂಜಯ್‌ ಹೇಳುತ್ತಾರೆ.

ಬಾಹ್ಯಾಕಾಶದ ಖಾಸಗಿ ಮಾಲೀಕತ್ವವು ಪ್ರಾಯೋಗಿಕವಾಗಿ ಸಾಧ್ಯವಾಗದಿದ್ದರೂ ಕೆಲ ವೆಬ್‌ಸೈಟ್‌ಗಳು ಚಂದ್ರನ ಮೇಲಿನ ಭೂಮಿಯನ್ನು ಮಾರಾಟ ಮಾಡುತ್ತವೆ. ಇದನ್ನು ಖರೀದಿಸಿರುವವರಿಗೆ ಒಂದು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.

ಈ ಹಿಂದೆ ಅನೇಕ ಭಾರತೀಯರು ಚಂದ್ರನ ಮೇಲಿನ ಜಾಗವನ್ನು ಖರೀದಿಸಿದ್ದಾರೆ. 2020 ರಲ್ಲಿ, ರಾಜಸ್ಥಾನದ ಅಜ್ಮೀರ್‌ನಲ್ಲಿ ವ್ಯಕ್ತಿಯೊಬ್ಬರು ತಮ್ಮ ವಿವಾಹ ವಾರ್ಷಿಕೋತ್ಸವದಂದು ತಮ್ಮ ಪತ್ನಿಗೆ ಚಂದ್ರನ ಮೇಲೆ ಮೂರು ಎಕರೆ ಜಾಗವನ್ನು ಉಡುಗೊರೆಯಾಗಿ ನೀಡಿದ್ದರು. ತಮ್ಮ ಎಂಟನೇ ವಿವಾಹ ವಾರ್ಷಿಕೋತ್ಸವದಂದು ತಮ್ಮ ಪತ್ನಿ ಸಪ್ನಾ ಅನಿಜಾ ಅವರಿಗೆ ವಿಶೇಷವಾದ ಏನಾದರೂ ಮಾಡಬೇಕೆಂದು ಬಯಸಿ ಚಂದ್ರನ ಮೇಲೆ ಭೂಮಿಯನ್ನು ಖರೀದಿಸಿರುವುದಾಗಿ ಧರ್ಮೇಂದ್ರ ಅನಿಜಾ ಹೇಳಿದ್ದರು.

2018 ರಲ್ಲಿ, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಚಂದ್ರನ ದೂರದ ಭಾಗದಲ್ಲಿರುವ ಮೇರ್ ಮಸ್ಕೋವಿಯೆನ್ಸ್ ಅಥವಾ “ಸೀ ಆಫ್ ಮಸ್ಕೋವಿ” ಎಂಬ ಪ್ರದೇಶದಲ್ಲಿ ಚಂದ್ರನ ಜಾಗವನ್ನು ಖರೀದಿಸಿದ್ದರು.

ಬೋಧಗಯಾದ ನಿವಾಸಿ ನೀರಜ್ ಕುಮಾರ್ ಅವರು ನಟರಾದ ಶಾರುಖ್ ಖಾನ್ ಮತ್ತು ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರಿಂದ ಸ್ಫೂರ್ತಿ ಪಡೆದ ನಂತರ ತಮ್ಮ ಹುಟ್ಟುಹಬ್ಬದಂದು ಚಂದ್ರನ ಮೇಲೆ ಒಂದು ಎಕರೆ ಭೂಮಿಯನ್ನು ಖರೀದಿಸಿದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement