ಪವರ್ ಟಿವಿ ಪ್ರಸಾರಕ್ಕೆ ನಿರ್ಬಂಧ ಹೇರಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಸೂಕ್ತ ಪರವಾನಿಗೆ ಇಲ್ಲದೆ ಪವರ್ ಟಿವಿ ನಡೆಸುಲಾಗುತ್ತಿತ್ತು ಎನ್ನುವ ಆರೋಪದ ಮೇಲೆ ಹೈಕೋರ್ಟ್ ಪ್ರಸಾರಕ್ಕೆ ನಿರ್ಬಂಧ ಹೇರಿತ್ತು. ಈ ಪ್ರಕರಣ ವಿಚಾರಣೆ ನಡೆಸಿದ ಸಿಜೆಐ ಡಿ.ವೈ.ಸಂದ್ರಚೂಡ್ ಪೀಠವು, ಈ ವಿಚಾರದ ಕುರಿತಾಗಿ ನಾವು ಇನ್ನೇನೂ ಕೇಳಲು ಬಯಸುವುದಿಲ್ಲ. ಇದು ರಾಜಕೀಯ ದ್ವೇಷದ ಕ್ರಮ ಎನ್ನುವುದು ಸ್ಪಷ್ಟವಾಗುತ್ತಿದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿಯಬೇಕು ಎಂದಿದೆ. ವಿವಾದ ಸೃಷ್ಟಿಸಿತ್ತು ಪವರ್ ಟಿವಿ! ಪವರ್ ಟಿವಿಯಲ್ಲಿ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ ಸಮಗ್ರ ವರದಿ ಪ್ರಕಟವಾಗಿತ್ತು. ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳ ವಿವರ, ಎಫ್ಐಆರ್‌ಗಳ ವಿವರ ಹಾಗೂ ಅದರಲ್ಲಿನ ಎಲ್ಲ ಸೂಕ್ಷ್ಮ ಮಾಹಿತಿಗಳನ್ನೂ ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು. ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ಐಪಿಎಸ್ ಅಧಿಕಾರಿ ಬಿ. ಆರ್. ರವಿಕಾಂತೇ ಗೌಡ ಹಾಗೂ ಮಾಜಿ ಎಂಎಲ್‌ಸಿ ರಮೇಶ್ ಗೌಡ, 2021ರಿಂದಲೇ ಪವರ್ ಟಿವಿ ಪರವಾನಗಿ ಇಲ್ಲದೆ ಸುದ್ದಿ ಪ್ರಸಾರ ಮಾಡುತ್ತಿದೆ ಎಂದು ಆರೋಪಿಸಿದ್ದರು. ಪರವಾನಗಿಯನ್ನು ನವೀಕರಣ ಮಾಡದೇ ವಾಹಿನಿ ಕಾರ್ಯಾಚರಣೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಪವರ್ ಟಿವಿ ಪ್ರಸಾರಕ್ಕೆ ತಡೆಯಾಜ್ಞೆ ನೀಡಿತ್ತು. ಇದು ರಾಜಕೀಯ ದ್ವೇಷ ಎಂದ ಸುಪ್ರೀಂ ಕೋರ್ಟ್! ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಸಾರಥ್ಯದ ಪೀಠವು, ಈ ವಿಚಾರದ ಕುರಿತಾಗಿ ನಾವು ಇನ್ನೇನೂ ಕೇಳಲು ಬಯಸೋದಿಲ್ಲ. ಇದು ರಾಜಕೀಯ ದ್ವೇಷದ ಕ್ರಮ ಅನ್ನೋದು ಸ್ಪಷ್ಟವಾಗುತ್ತಿದೆ ಎಂದಿದ್ದಾರೆ. ಅವರ ದನಿಯನ್ನು ಸಂಪೂರ್ಣವಾಗಿ ಉಡುಗಿಸಬೇಕು ಅನ್ನೋದು ಉದ್ದೇಶವಾಗಿತ್ತು. ಹೀಗಾಗಿ ವಾಹಿನಿ ಪ್ರಸಾರಕ್ಕೆ ತಡೆ ಹಿಡಿಯಲಾಗಿತ್ತು. ಆದರೆ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಣೆ ಮಾಡೋದು ಸರ್ಕಾರಗಳ ಕರ್ತವ್ಯ ಎಂದು ಮುಖ್ಯ ನ್ಯಾಯಮೂರ್ತಿಗಳು ಚಾಟಿ ಬೀಸಿದ್ದಾರೆ. ಪವರ್ ಟಿವಿ ಪರ ಹಿರಿಯ ವಕೀಲರಾದ ರಂಜಿತ್ ಕುಮಾರ್, ಸುನಿಲ್ ಫೆರ್ನಾಂಡಿಸ್ ಮತ್ತು ವಕೀಲರಾದ ಮಿಥು ಜೈನ್ ಮತ್ತು ಸಂಚಿತ್ ಗರ್ಗಾ ಅವರು ವಾದ ಮಂಡಿಸಿದ್ದರು.