ಇಸ್ಲಮಾಬಾದ್: ನೈಋತ್ಯ ಪಾಕಿಸ್ತಾನದ ಕಲ್ಲಿದ್ದಲು ಗಣಿಯಲ್ಲಿ ಭಾರೀ ಸ್ಫೋಟ ಸಂಭವಿಸಿ 12 ಕಾರ್ಮಿಕರು ಮೃತಪಟ್ಟಿದ್ದು, 8 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಣಿಯ ಆಳದಲ್ಲಿ 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಮಿಥೇನ್ ಗ್ಯಾಸ್ ಸ್ಫೋಟಗೊಂಡಿದ್ದು, 12 ಕೆಲಸಗಾರರು ಸಾವನಪ್ಪಿದ್ದಾರೆ.
ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದ ಸ್ಥಳೀಯ ತಂಡವೊಂದರ 8 ಮಂದಿಯೂ ಗಣಿಯಾಳದಲ್ಲಿ ಸಿಕ್ಕಿಬಿದ್ದ ಘಟನೆಯೂ ನಡೆದಿದ್ದು, ಅವರನ್ನೂ ಸುರಕ್ಷಿತವಾಗಿ ಹೊರಗೆ ತಂದು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಬಲೂಚಿಸ್ತಾನ ಪ್ರಾಂತದ ಮುಖ್ಯ ಗಣಿ ಇನ್‍ಸ್ಪೆಕ್ಟರ್ ಅಬ್ದುಲ್ ಘನಿ ಬಲೋಚ್ ಹೇಳಿದ್ದಾರೆ.
ಖಾಸಗಿ ನಿರ್ವಹಣೆಯ ಗಣಿ ಇದಾಗಿದ್ದು ಸೂಕ್ತ ಸುರಕ್ಷಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಇದೇ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.