ಪಾಕಿಸ್ತಾನದ ಯುವತಿ ಜೊತೆ ಭಾರತದ ಯುವಕನ ಮದುವೆ ಆನ್‌ಲೈನ್‌ನಲ್ಲಿ ನೆರವೇರಿದೆ. ಈ ವಿವಾಹ ನೋಂದಣಿ ಈಗ ಇಡೀ ದೇಶದಲ್ಲಿ ಭಾರೀ ಸುದ್ದಿಯಾಗಿದೆ.
ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ತೆಹ್ಸಿನ್ ಶಹೀದ್ ಅವರ ಪುತ್ರ ಮೊಹಮ್ಮದ್ ಅಬ್ಬಾಸ್ ಅವರ ವಿವಾಹ ನಡೆದಿದ್ದು, ಆನ್‌ಲೈನ್‌ನಲ್ಲಿ ಈ ವಿವಾಹ ನೋಂದಣಿಯಾಗಿದೆ. ಅಂದಲೀಬ್ ಜಹಾರಾ ಅವರು ತಹ್ರೀನ್ ಶಹೀದ್ ಅವರ ಸಂಬಂಧಿಯ ಪುತ್ರಿ. ಹೈದರ್ ಮತ್ತು ಜಹಾರಾ ಅವರ ಮದುವೆಯು ಕಳೆದ ವರ್ಷ ನಿಶ್ಚಯವಾಗಿತ್ತು. ಹೈದರ್ ಕುಟುಂಬ ಕಳೆದ ವರ್ಷವೇ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಅರ್ಜಿಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಿರಲಿಲ್ಲ.
ಕೆಲವು ದಿನಗಳ ಹಿಂದೆ, ಜಹಾರಾ ಅವರ ತಾಯಿ ರಾಣಾ ಯಾಸ್ಕೀನ್ ಜೈದಿ ಅವರ ಆರೋಗ್ಯ ಕ್ಷೀಣಿಸಿತು. ಜೈದಿ ಅವರ ಆರೋಗ್ಯ ಪರಿಸ್ಥಿತಿ ಹದಗೆಟ್ಟು ಗಂಭೀರ ಸ್ಥಿತಿ ಎದುರಿಸುವಂತಾಯಿತು. ಆದಷ್ಟು ಬೇಗನೆ ಮಗಳ ಮದುವೆ ನೆರವೇರಿಸಬೇಕು ಎಂದು ರಾಣಾ ಯಾಸ್ಕೀನ್ ಕೊನೆಯಾಸೆಯಾಗಿತ್ತು. ಆ ಮದುವೆಯನ್ನು ತಾನು ಕಣ್ತುಂಬಿಕೊಳ್ಳಬೇಕು ಎಂದು ಬಯಸಿದ್ದಳು. ಈ ಇಚ್ಚೆಗೆ ಎರಡು ಕುಟುಂಬಗಳೂ ಸಮ್ಮತಿ ನೀಡಿದ ಕಾರಣಕ್ಕೆ ಆನ್‌ಲೈನ್ ಮೂಲಕವೇ ಮದುವೆ ನೆರವೇರಿತು. ಶುಕ್ರವಾರ ಆನ್‌ಲೈನ್ ಮೂಲಕ ಮದುವೆ ನಡೆದಿದೆ. ವಧುವಿನ ಕಡೆಯವರು ಟಿವಿ ಪರದೆ ಮೇಲೆ ವಿಧಿ ವಿಧಾನಗಳನ್ನು ವೀಕ್ಷಿಸಿ ಮದುವೆಗೆ ಸಾಕ್ಷಿಯಾಗಿದ್ದಾರೆ. ಪತ್ನಿಗೆ ತ್ವರಿತವಾಗಿ ವೀಸಾ ನೀಡುವಂತೆ ಮಹಮ್ಮದ್ ಅಬ್ಬಾಸ್ ಹೈದರ್ ಕೇಂದ್ರ ಸರ್ಕಾರಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ.