ಕಾರ್ಗಿಲ್ : ಪಾಕಿಸ್ತಾನವು ದುಸ್ಸಾಹಸ ನಡೆಸಿದಾಗಲೆಲ್ಲಾ ಸೋಲನ್ನು ಎದುರಿಸಿದೆ. ಅದು ಇತಿಹಾಸದಿಂದ ಯಾವುದೇ ಪಾಠಗಳನ್ನು ಕಲಿತಿಲ್ಲ. ಅದು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ ಎಂದು ಕಾರ್ಗಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಕ್ ವಿರುದ್ಧ ಕಿಡಿಕಾರಿದ್ದಾರೆ.
1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು. ಈ ವೇಳೆ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಸೈನಿಕರು ಮಾಡಿದ ತ್ಯಾಗ ಅಮರ ಮತ್ತು ಕಾರ್ಗಿಲ್ ವಿಜಯ್ ದಿವಸ್ ರೂಪದಲ್ಲಿ ಸದಾ ನೆನಪಿನಲ್ಲಿ ಉಳಿಯುತ್ತದೆ ಎಂದರು.
ಬಳಿಕ ಹಿಮಾಚಲ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ನಡುವೆ ಎಲ್ಲಾ ಹವಾಮಾನದಲ್ಲೂ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿರುವ ಸುರಂಗ ನಿರ್ಮಾಣಕ್ಕಾಗಿ ಮೊದಲ ಸ್ಫೋಟ ನಡೆಸುವ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.
ಜು.26, 1999 ರಂದು, ಭಾರತೀಯ ಸೇನೆಯು `ಆಪರೇಷನ್ ವಿಜಯ್’ ಮೂಲಕ ಪಾಕ್ ವಿರುದ್ಧ ಜಯ ಗಳಿಸಿತು. ಲಡಾಖ್‌ನ ಕಾರ್ಗಿಲ್‌ನ ಹಿಮಾವೃತ ಪರ್ವತದ ಮೇಲೆ ಸುಮಾರು ಮೂರು ತಿಂಗಳ ಸುದೀರ್ಘ ಯುದ್ಧದ ನಂತರ ಭಾರತ ಈ ವಿಜಯವನ್ನು ಗಳಿಸಿತ್ತು. ಈ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ.