ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಎಕ್ಸ್ (ಟ್ವಿಟ್ಟರ್) ಅನ್ನು ನಿಷೇಧಿಸಲಾಗಿದೆ. ಸಾಮಾನ್ಯವಾಗಿ ಪಾಕಿಸ್ತಾನದ ವೆಬ್ ಬ್ರೌಸರ್‌ಗಳಲ್ಲಿ ಎಕ್ಸ್ ದೊರೆಯುವುದಿಲ್ಲ. ಆದರೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಅಮೆರಿಕ ಅಧ್ಯಕ್ಷರಾಗಿ ಆಯ್ಕೆಗೊಂಡ ಡೊನಾಲ್ಡ್ ಟ್ರಂಪ್ ಅವರನ್ನು ಅಭಿನಂದಿಸಲು ವಿಪಿಎನ್ ಬಳಸಿ ಸಿಕ್ಕಿಬಿದ್ದಿದ್ದಾರೆ. ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡನೇ ಅವಧಿಗೆ ಐತಿಹಾಸಿಕ ವಿಜಯ ದಾಖಲಿಸಿರುವುದಕ್ಕೆ ಅಭಿನಂದನೆಗಳು. ಪಾಕಿಸ್ತಾನ-ಅಮೆರಿಕ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಮತ್ತು ವಿಸ್ತರಿಸಲು ಹೊಸ ಆಡಳಿತದೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ’ ಎಂದು ಷರೀಫ್ ನವೆಂಬರ್ 6ರಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಶರೀಫ್ ಸರಕಾರ ಈ ವರ್ಷದ ಆರಂಭದಲ್ಲಿ ಪಾಕಿಸ್ತಾನದಲ್ಲಿ ‘ಎಕ್ಸ್’ಗೆ ನಿಷೇಧ ವಿಧಿಸಿತ್ತು. ಬಲೂಚಿಸ್ತಾನ್ ಲಿಬರೇಷನ್ ಆರ್ಮಿ(ಬಿಎಲ್‍ಎ) ಉಗ್ರಗಾಮಿಗಳು ದೇಶವಿರೋಧಿ ಚಟುವಟಿಕೆಗಳನ್ನು ಹರಡಲು ವೇದಿಕೆಯನ್ನು ಬಳಸುತ್ತಿದ್ದರು ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲಾ ತರಾರ್ ಪ್ರತಿಪಾದಿಸಿದ್ದರು. ಹೀಗಾಗಿ ಪಾಕಿಸ್ತಾನದಲ್ಲಿ ಎಕ್ಸ್ ನಿಷೇಧಕ್ಕೆ ತುತ್ತಾಗಿತ್ತು. ಹೀಗಿದ್ದರೂ ನಿಷೇಧಿತ ಎಕ್ಸ್ ಖಾತೆ ಪ್ರವೇಶಿಸಲು ಪ್ರಧಾನಿಗಳು ವಿಪಿಎನ್ ಬಳಸಿದ್ದಾರೆ. ಇದರಿಂದ ಕಾನೂನು ಉಲ್ಲಂಘನೆಯಾಗಿದೆ ಎಂದು ಪಾಕಿಸ್ತಾನದ ಪ್ರಜೆಗಳು ಆಕ್ರೋಶ ವ್ಯಕ್ತವಾಗಿದೆ.