ಇಸ್ಲಾಮಾಬಾದ್: ಭಯೋತ್ಪಾದನಾ ಚಟುವಟಿಕೆ, ಉಗ್ರವಾದದಿಂದ ವ್ಯಾಪಾರ, ಇಂಧನ ಮತ್ತು ಸಂಪರ್ಕದಂತಹ ಕ್ಷೇತ್ರಗಳಲ್ಲಿ ಸಹಕಾರ ಹೊಂದುವುದು ಅಸಂಭವ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಅಧ್ಯಕ್ಷತೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ಶಾಂಘೈ- ಸಹಕಾರ ಸಂಘಟನೆಯ ಸಭೆಯಲ್ಲಿ ಮಾತನಾಡಿದರು. ಸಹಕಾರಕ್ಕೆ ವಿಶ್ವಾಸವು ಪ್ರಮುಖವಾಗಿದೆ. ಸಾಮೂಹಿಕವಾಗಿ ಮುಂದುವರೆದರೆ ಶಾಂಘೈ ಸದಸ್ಯ ರಾಷ್ಟ್ರಗಳು ಅಪಾರ ಪ್ರಯೋಜನವನ್ನು ಪಡೆಯಬಹುದು ಎಂದರು. ಪರಸ್ಪರ ಗೌರವ ಮತ್ತು ಸಾರ್ವಭೌಮ ಸಮಾನತೆ ಆಧಾರದ ಮೇಲೆ ಸಹಕಾರ ಇರಬೇಕು, ರಾಷ್ಟ್ರಗಳ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗುರುತಿಸಬೇಕು ಎಂದು ಹೇಳಿದ ಜೈ ಶಂಕರ್, ಶಾಂಘೈ ಸಹಕಾರ ಸಂಘಟನೆಯ ಮಹತ್ವವನ್ನು ವಿವರಿಸಿದರು. ವ್ಯಾಪಾರ ಮತ್ತು ಸಾಗಣೆಯಲ್ಲಿ ಗುಂಪಿನ ರಾಷ್ಟ್ರವೊಂದರ ಜೊತೆಗೆ ವ್ಯವಹಾರ ನಡೆಸುವ ‘ಚೆರ್ರಿ-ಪಿಕ್’ ಅಭ್ಯಾಸಗಳಿಂದ ಪ್ರಗತಿ ಹೊಂದಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಚೀನಾದ ನಡವಳಿಕೆ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ವಿಶ್ವಸಂಸ್ಥೆ ಭದ್ರತಾ ಮಂಡಳಿ (UNSC) ಸುಧಾರಣೆಯ ಅಗತ್ಯ ಕುರಿತು ಮಾತನಾಡಿದ ಜೈಶಂಕರ್, ಶಾಶ್ವತ ಮತ್ತು ಶಾಶ್ವತವಲ್ಲದ ವಿಭಾಗಗಳಲ್ಲಿ ಯುಎನ್ ಭದ್ರತಾ ಮಂಡಳಿಯ ಸಮಗ್ರ ಸುಧಾರಣೆ ಅತ್ಯಗತ್ಯವಾಗಿದೆ ಎಂದರು.
