ನವದೆಹಲಿ: ಪಾಕಿಸ್ತಾನಿ ಕ್ರಿಕೆಟಿಗ ಮುಹಮ್ಮದ್ ರಿಜ್ವಾನ್ ವಿರುದ್ಧ ಐಸಿಸಿಗೆ ದೂರು ನೀಡಿದ್ದಕ್ಕೆ ನನಗೆ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ನಿಂದ ತನಗೆ ಜೀವ ಬೆದರಿಕೆ ಬಂದಿದೆ ಎಂದು ವಕೀಲ ವಿನೀತ್ ಜಿಂದಾಲ್ ಆತಂಕ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಮತ್ತು ನೆದರ್ಲೆಂಡ್ಸ್ ನಡುವಿನ ವಿಶ್ವಕಪ್ ಪಂದ್ಯದ ವೇಳೆ ರಿಜ್ವಾನ್ ಕ್ರಿಕೆಟ್ ಮೈದಾನದಲ್ಲಿ ನಮಾಜ್ ಮಾಡಿದ್ದರು. ಈ ವಿಚಾರವಾಗಿ ವಕೀಲ ವಿನೀತ್ ಜಿಂದಾಲ್ ಅವರು ಐಸಿಸಿಯನ್ನು ಸಂಪರ್ಕಿಸಿ ದೂರು ನೀಡಿದ್ದರು. ರಿಜ್ವಾನ್ ಅವರ ಕ್ರಮವು “ಕ್ರೀಡೆಯ ಉತ್ಸಾಹಕ್ಕೆ ವಿರುದ್ಧವಾಗಿದೆ” ಎಂದು ವಕೀಲ ವಿನೀತ್ ಜಿಂದಾಲ್ ತಮ್ಮ ದೂರಿನಲ್ಲಿ ಹೇಳಿದ್ದರು. ಇದೇ ವಿಚಾರಕ್ಕೆ ಅವರಿಗೆ ಉಗ್ರರು ಜೀವ ಬೆದರಿಕೆ ಹಾಕಿದ್ದಾರೆ.