ನವದೆಹಲಿ: ಪಾಕ್ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಭಾನುವಾರ ಬಂಧಿಸಿದೆ.
ಗುಜರಾತ್‌ನ ಜಾಮ್‌ನಗರ ನಿವಾಸಿ ಮೊಹಮ್ಮದ್ ಸಕ್ಲೇನ್ ಬಂಧಿತ ಆರೋಪಿ. ಸಕ್ಲೇನ್ ಎಂಬಾತ ಸಿಮ್ ಕಾರ್ಡ್ ಖರೀದಿಸಿ ಭಾರತೀಯ ನಂಬರ್‌ನಲ್ಲಿ ವಾಟ್ಸಾಪ್ ಖಾತೆ ತೆರೆದಿದ್ದ. ಅಲ್ಲದೆ ಇದನ್ನು ಪಾಕಿಸ್ತಾನಿ ಹ್ಯಾಂಡ್ಲರ್‌ಗಳು ನಿರ್ವಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೇನಾ ಸಿಬ್ಬಂದಿ ವಿರುದ್ಧ ಬೇಹುಗಾರಿಕೆ ನಡೆಸಲು ಈ ಸಂಖ್ಯೆ ಉಪಯೋಗವಾಗುತ್ತಿತ್ತು. ಪಾಕಿಸ್ತಾನಿ ಕಾರ್ಯಕರ್ತರಿಗೆ ಗೌಪ್ಯ ಮಾಹಿತಿ ರವಾನೆ ಆಗುತ್ತಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ ಎಟಿಎಸ್ ಬೇಹುಗಾರಿಕೆ ಏಜೆಂಟ್ ಲಾಭಶಂಕರ್ ಮಹೇಶ್ವರಿ ಅವರನ್ನು ಬಂಧಿಸಲಾಗಿತ್ತು. ಇದೀಗ ಪ್ರಕರಣ ಸಂಬಂಧ ಮೊಹಮ್ಮದ್ ಸಕ್ಲೇನ್ ನನ್ನು ಪೊಲೀಸರು ಬಂಧಿಸಿದ್ದಾರೆ.