ಬೆಂಗಳೂರು: ವಿಧವಾ ವೇತನ ನೀಡಲು ವೃದ್ಧೆ ಬಳಿ 4 ಸಾವಿರ ಲಂಚ ಕೇಳಿದ ಅಧಿಕಾರಿ ವಿರುದ್ಧ ಕ್ರಮ, ಸರ್ಕಾರಿ ಪ್ರೌಢಶಾಲಾ ಶಾಲೆ ಕಟ್ಟಿಸಿಕೊಡಿ, ನಮ್ಮ ಏರಿಯಾ ಜನರಿಗೆ ಕುಡಿಯುವ ನೀರು, ಸ್ಮಶಾನಕ್ಕೆ ಜಾಗ ಬೇಕು, ಅಂಗನವಾಡಿ, ಸಂಚಾರ ದಟ್ಟಣೆ, ಪಾರ್ಕ್ ಸಮಸ್ಯೆ ಬಗೆಹರಿಸಿ ಎಂದು ಸಲ್ಲಿಸಿದ ಸಾವಿರಾರು ಅರ್ಜಿಗಳನ್ನು ಸ್ವೀಕರಿಸಿ ಕಾನೂನಾತ್ಮಕ ಪರಿಹಾರದ ಭರವಸೆ ನೀಡಿದ ಡಿಸಿಎಂ.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ, ಜರಗನಹಳ್ಳಿ ಸರ್ಕಾರಿ ಶಾಲಾ ಆಟದ ಮೈದಾನದಲ್ಲಿ ನಡೆದ ‘ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.
ಒಂದಷ್ಟು ಹೊತ್ತು ವೇದಿಕೆಯ ಮೇಲೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಡಿಸಿಎಂ ಅವರು, ಅಪಾರ ಸಂಖ್ಯೆಯಲ್ಲಿ ಜನರು ಅಹವಾಲು ಸಲ್ಲಿಸಲು ಬಂದಿದ್ದನ್ನು ಕಂಡು ವೇದಿಕೆಯಿಂದ ಇಳಿದು ಜನರು ಇದ್ದಲಿಯೇ ತೆರಳಿ ಅವರ ಮನವಿಗಳನ್ನು ಆಲಿಸಿ ಪರಿಹಾರ ಸೂಚಿಸಿದರು. ಸುಮಾರು 5 ಗಂಟೆಯ ಹೊತ್ತಿಗೆ ಊಟಕ್ಕೆ ತೆರಳಿದ ಡಿಸಿಎಂ ಅವರು ಆನಂತರ ಮತ್ತೆ ಅಹವಾಲು ಸ್ವೀಕರಿಸಲು ಪ್ರಾರಂಭಿಸಿದರು.
ಬನಶಂಕರಿ ತಾಲ್ಲೂಕು ಕಚೇರಿಯಲ್ಲಿ ಪಿಂಚಣಿ ಪಡೆಯಲು ಗೊಟ್ಟಿಗೆರೆಯ ಮಣಿಯಮ್ಮ ಅವರು ಹೋದಾಗ ಅಧಿಕಾರಿಗಳೇ ಏಜೆಂಟರ ಬಳಿ ಕಳುಹಿಸುತ್ತಾರೆ. ಗೇಟ್ ಬಳಿ ರಮೇಶ್ ಎಂಬುವವರು ಹಾಗು ಕೊಠಡಿ ಸಂಖ್ಯೆ 24 ರಲ್ಲಿರುವ ಅಧಿಕಾರಿ ನಾಲ್ಕು ಸಾವಿರ ಲಂಚ ಕೇಳುತ್ತಾರೆ ಎಂದು ದೂರು ನೀಡಿದಾಗ, ಬನಶಂಕರಿ ಉಪ ತಹಶೀಲ್ದಾರರನ್ನು ಕರೆದ ಶಿವಕುಮಾರ್ ಅವರು ಕೂಡಲೇ ಆ ಮಹಿಳೆಯಿಂದ ಲಂಚ ಕೇಳಿದ ಅಧಿಕಾರಿ ಮಾಹಿತಿ ಪಡೆದು ಆತನನ್ನು ಅಮಾನತು ಮಾಡಿ ಎಂದು ಸೂಚಿಸಿದರು.
ಅಧಿಕಾರಿಗಳ ಕಾರ್ಯವೈಖರಿಯಲ್ಲಿ ಬದಲಾವಣೆಯಾಗಿದೆ
ಈ ಮೊದಲು ಯಾವ ಅಧಿಕಾರಿಗಳೂ ತಮ್ಮ ಹುದ್ದೆ ಮತ್ತು ಹೆಸರಿನ ಬೋರ್ಡನ್ನು ಹಾಕಿಕೊಳ್ಳುತ್ತಿರಲಿಲ್ಲ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದನಂತರ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಜೆ.ಪಿ.ನಗರದ ಸುರೇಂದ್ರನಾಥ್ ಅವರು ಸರ್ಕಾರ ಮತ್ತು ಡಿಸಿಎಂ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕೊರೋನಾ ಸಮಯದಲ್ಲಿ ಮುಚ್ಚಿರುವ ಉದ್ಯಾನಗಳನ್ನು ತೆರೆಯಿರಿ ಎಂದು ಸುರೇಂದ್ರನಾಥ ಅವರು ಮನವಿ ನೀಡಿದಾಗ. “ಉದ್ಯಾನಗಳನ್ನು ಸಾರ್ವಜನಿಕರ ಬಳಕೆಗೆ ತೆರೆಯಿರಿ” ಎಂದು ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದರು.
ಎಸ್‌ಡಿಎಂಸಿ, ಸಿಡಿಸಿ ಸಮಿತಿಗಳಲ್ಲಿ ಕಳೆದ 15 ವರ್ಷಗಳಿಂದ ಒಂದೇ ಪಕ್ಷದವರು ಆಡಳಿತ ಮಾಡುತ್ತಿದ್ದಾರೆ. ನಮಗೂ ಅವಕಾಶ ನೀಡಿ ಎಂಬ ಬೊಮ್ಮನಹಳ್ಳಿಯ ಅನಿಲ್ ಅವರ ಮನವಿಗೆ “ಸಮಿತಿಗಳಿಗಳಲ್ಲಿ ಎಲ್ಲಾ ಸಾರ್ವಜನಿಕರಿಗೂ ಅವಕಾಶ ಕಲ್ಪಿಸುವಂತೆ ನೋಡಿಕೊಳ್ಳಲಾಗುವುದು” ಎಂದರು ಡಿಸಿಎಂ.
‘ರೋಗ- ರುಜಿನಗಳು, ಅಂಗವಿಕಲವಾಗಿರುವ ಪ್ರಾಣಿಗಳನ್ನು ಸಾಕಲು ಒಂದು ಜಾಗ ನೀಡಿ’ ಎಂದು ವೀಣಾ ಕೇಶವಮೂರ್ತಿ ಎಂಬುವರು ಮನವಿ ಸಲ್ಲಿಸಿದಾಗ “ಜಾಗ ನೀಡುವ ಕುರಿತು ಪರಿಶೀಲನೆ ಮಾಡಲಾಗುವುದು” ಎಂದು ಭರವಸೆ ನೀಡಿದರು.
ಜರಗನಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆ ನಿರ್ಮಾಣ ಮಾಡಬೇಕು ಎಂದು ಸತ್ಯನಾರಾಯಣ ಅವರು ಮನವಿ ನೀಡಿದಾಗ “ಜಾಗ ಇದೆಯೇ” ಎಂದು ಡಿಸಿಎಂ ಕೇಳಿದರು. “ಪ್ರಸ್ತುತ ಕಾರ್ಯಕ್ರಮ ನಡೆಯುತ್ತಿರುವ ಜಾಗದಲ್ಲೇ ನಿರ್ಮಾಣ ಮಾಡಬಹುದು” ಎಂದು ಮನವಿದಾರರು ತಿಳಿಸಿದಾಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು “ಶೀಘ್ರದಲ್ಲಿಯೇ ಮಾಡೋಣ” ಎಂದರು.
ಭುವನೇಶ್ವರಿ ನಗರದ ಕೇಶವರೆಡ್ಡಿ ಮನೆ ಬೇಕು ಎಂದು ಮನವಿ ಸಲ್ಲಿಸಿದರೆ, ಪ್ರೇಮನಾಥ ಎಂಬುವರು ನಮ್ಮ ಮೊಮ್ಮಗನಿಗೆ ವಿದ್ಯಾರ್ಥಿ ವೇತನ ಬರುತ್ತಿಲ್ಲ, ಅಕ್ಕಿ ದುಡ್ಡು ಬರುತ್ತಿಲ್ಲ ಎಂದು ಲಕ್ಷಮ್ಮ, ಹಕ್ಕುಪತ್ರ ನೀಡುತ್ತಿಲ್ಲ ಎಂದು ಜಬೀವುಲ್ಲಾ ಅವರು ಮನವಿ ನೀಡಿದರು.
ಕಾರ್ಯಕ್ರಮದ ವೇಳೆ ಮಾಧ್ಯಮಗಳಿಗೆ ಡಿಸಿಎಂ ಪ್ರತಿಕ್ರಿಯೆ:
ಈ ಭಾಗದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಖಾತೆ ಸಮಸ್ಯೆ, ತೆರಿಗೆ ಹೊರೆ ಹೆಚ್ಚಾಗಿದೆ ಎಂಬ ದೂರುಗಳು ಹೆಚ್ಚಾಗಿ ಕೇಳಿ ಬಂದಿವೆ. ಜನರ ತೆರಿಗೆ ಹೊರೆ ಇಳಿಸುವ ವಿಚಾರದಲ್ಲಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಪರಿಶೀಲಿಸಿ ಕಾನೂನಿಗೆ ತಿದ್ದುಪಡಿ ತರಬೇಕಾಗಿದೆ. 2020ರಲ್ಲಿ ಜಾರಿಗೆ ತಂದಿರುವ ಕಾಯ್ದೆಯಲ್ಲಿ ದುಪ್ಪಟ್ಟು ದಂಡ ಕಟ್ಟುವಂತಾಗಿದೆ. ಇದನ್ನು ಕಡಿಮೆ ಮಾಡಲು ಚರ್ಚೆ ಮಾಡುತ್ತಿದ್ದೇವೆ. ಈ ವಿಚಾರವಾಗಿ ಜನರಿಗೆ ಕಾಲಾವಕಾಶ ನೀಡಿ, ಪರಿಹಾರವನ್ನು ನೀಡಬೇಕಿದೆ.
ವಸತಿ ಪಡೆಯಲು ಹಣ ಕಟ್ಟಿದ್ದರು ಹಲವರಿಗೆ ಮನೆ ಸಿಕ್ಕಿಲ್ಲ. ಮತ್ತೆ ಕೆಲವರು ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಿದ್ದಾರೆ. ಇವರೆಲ್ಲರನ್ನು ಭೇಟಿ ಮಾಡಿ ಅವರ ಅಹವಾಲು ಸ್ವೀಕಾರ ಮಾಡುತ್ತೇನೆ.
110 ಹಳ್ಳಿಗಳ ಅಭಿವೃದ್ಧಿ ವಿಚಾರವಾಗಿ ಸ್ಥಳೀಯ ಶಾಸಕರು ಹಾಗೂ ಸಂಸದರು ಬೇಡಿಕೆ ಇಟ್ಟಿರುವ ಬಗ್ಗೆ ಕೇಳಿದಾಗ, “ಈ ಭಾಗದಲ್ಲಿ ಸಂಪರ್ಕ ಹಾಗೂ ಕುಡಿಯುವ ನೀರಿನ ಯೋಜನೆಗೆ ಆದ್ಯತೆ ನೀಡುತ್ತೇವೆ” ಎಂದು ತಿಳಿಸಿದರು.
ಧರ್ಮ ವಿಚಾರದಲ್ಲಿ ರಾಜಕೀಯ ಮಾಡಬಾರದು
ರಾಮ ಮಂದಿರ ವಿಚಾರದಲ್ಲಿ ರಾಜಕೀಯ ನಡೆಯುತ್ತಿರುವ ಬಗ್ಗೆ ಮಾಧ್ಯಮಗಳು ಕೇಳಿದಾಗ, “ರಾಜಕೀಯದಲ್ಲಿ ಧರ್ಮ ಪಾಲನೆ ಮಾಡಬೇಕು, ಆದರೆ ಧರ್ಮದಲ್ಲಿ ರಾಜಕಾರಣ ಮಾಡಬಾರದು. ಈ ವಿಚಾರವನ್ನು ಹಿಂದೆಯೂ ಹೇಳಿದ್ದೆ, ಈಗಲೂ ಅದನ್ನೇ ಹೇಳುತ್ತೇನೆ” ಎಂದು ತಿಳಿಸಿದರು.