ಯಾದಗಿರಿ : ನಗರದ ಸೈಬರ್ ಠಾಣೆ ಪಿಎಸ್‌ಐ ಪರಶುರಾಮ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ವಿರುದ್ಧ ಕಿರುಕುಳ, ಪ್ರಚೋದನೆ, ಜಾತಿ ನಿಂದನೆ ಆರೋಪದಡಿ ಕೇಸ್ ದಾಖಲಾಗಿದೆ.
ಶಾಸಕ ಚೆನ್ನಾರೆಡ್ಡಿ ಪಾಟೀಲ್, ತಮ್ಮ ಕ್ಷೇತ್ರದ ವ್ಯಾಪ್ತಿಯ ಠಾಣೆಗಳನ್ನು ಒಂದು ರೀತಿ ಹರಾಜಿಗೆ ಇಟ್ಟಿದ್ದರು. ಯಾರು ಹೆಚ್ಚು ಹಣ ನೀಡುತ್ತಾರೊ ಅವರಿಗೆ ವರ್ಗಾವಣೆ ಶಿಫಾರಸು ಪತ್ರ ನೀಡ್ತಿದ್ದರು. 4-5 ಪಿಎಸ್‌ಐಗಳ ನಡುವೆ ಪೈಪೋಟಿ ಸೃಷ್ಟಿಸಿ ಹೆಚ್ಚು ನೀಡಿದವರಿಗೆ ಪೋಸ್ಟಿಂಗ್ ಮಾಡಲಾಗುತ್ತಿತ್ತು. ಹಣ ಇಲ್ಲದ ಪಿಎಸ್‌ಐಗಳಿಗೆ ಪೋಸ್ಟಿಂಗ್ ಸಿಗುತ್ತಿರಲಿಲ್ಲ? 1 ವರ್ಷದ ಪೋಸ್ಟಿಂಗ್ ಪಡೆಯಲು 20-30 ಲಕ್ಷ ಬೇಡಿಕೆ ಇಡುತ್ತಿದ್ದರು. ಹಣ ನೀಡಿದರೂ ಜಾತಿಯ ಲೆಕ್ಕಾಚಾರ ಹಾಕುತ್ತಿದ್ದರು. ಯಾದಗಿರಿ ವ್ಯಾಪ್ತಿಯ 2-3 ಠಾಣೆಗಳಲ್ಲಿ ಶಾಸಕನಿಗೆ 20-30 ಲಕ್ಷ ನೀಡಿ ಪೋಸ್ಟಿಂಗ್ ಪಡೆದಿರುವ ಆರೋಪ ಕೇಳಿಬಂದಿದೆ.
ಸರ್ಕಾರ ಈಗಾಗಲೇ ಪಿಎಸ್‌ಐ ಪರಶುರಾಮ್ ಸಾವು ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ಪ್ರಕರಣದ ತನಿಖೆಗಾಗಿ ಸಿಐಡಿ ತಂಡ ಯಾದಗಿರಿಗೆ ಆಗಮಿಸಿದೆ. ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಇದೀಗ ಶಾಸಕರ ವಿರುದ್ಧ ಕೇಸ್ ದಾಖಲಾಗುವ ಮೂಲಕ ಪ್ರಕರಣ ಸಂಬಂಧ ಮಹತ್ವದ ಬೆಳವಣಿಗೆಯಾಗಿದೆ.
ಪ್ರಕರಣವನ್ನ ಸಿಐಡಿ ತನಿಖೆಗೆ ನೀಡಿದ ಬೆನ್ನಲ್ಲೇ ಯಾದಗಿರಿಗೆ ಸಿಐಡಿ ಡಿವೈಎಸ್ಪಿ ಪುನೀತ ನೇತೃತ್ವದ ತಂಡ ಭೇಟಿ ಕೊಟ್ಟಿದೆ. ಯಾದಗಿರಿ ನಗರ ಪೊಲೀಸರಿಂದ ಕೇಸ್ ಫೈಲ್ ಪಡೆದು ಎಫ್‌ಐಆರ್ ಪ್ರತಿ, ಪಂಚನಾಮೆ ವರದಿ ಸೇರಿದಂತೆ ಮಾಹಿತಿ ಪಡೆದು ತನಿಖಾ ತಂಡ ತನಿಖೆ ಪ್ರಾರಂಭಿಸಲಿದೆ.