ಚಿತ್ರದುರ್ಗ: ಕೇಂದ್ರ ಸರ್ಕಾರದ ಹೊಸ ಯೋಜನೆಯಾದ ಪಿ.ಎಂ ವಿಶ್ವಕರ್ಮ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಜಿಲ್ಲೆಯ ಕುಶಲಕರ್ಮಿಗಳು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಆನಂದ್ ತಿಳಿಸಿದರು.
ನಗರದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಸಭಾಂಗಣದಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ಹೊಸ ಯೋಜನೆಯಾದ ಪಿ.ಎಂ.ವಿಶ್ವಕರ್ಮ ಯೋಜನೆಗೆ ಸಂಬಂಧಿಸಿದಂತೆ ಕುಶಲಕರ್ಮಿಗಳ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ, ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಿ.ಎಂ.ವಿಶ್ವಕರ್ಮ ಯೋಜನೆಗೆ ಸಂಬಂಧಪಟ್ಟಂತೆ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಆಹ್ವಾನಿಸಿ, ಈ ಯೋಜನೆಯ ಸೌಲಭ್ಯ ಪಡೆಯಲು ಬಡಿಗ ವೃತ್ತಿ ಮಾಡುವವರು, ದೋಣಿ ತಯಾರಿಸುವವರು, ಶಸ್ತ್ರ ತಯಾರಕರು, ಕಮ್ಮಾರ ವೃತ್ತಿ ಮಾಡುವವರು, ಕಲ್ಲುಕುಟಿಗ ವೃತ್ತಿ ಮಾಡುವವರು, ಬಟ್ಟೆ, ಚಾಪೆ-ಕಸ ಪೆÇರಕೆ ತಯಾರಕರು, ಗೊಂಬೆ ಮತ್ತು ಆಟಿಕೆ ತಯಾರಕರು (ಸಂಪ್ರದಾಯಿಕ) ಕ್ಷೌರಿಕ ವೃತ್ತಿ ಮಾಡುವವರು, ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು, ಹೂಮಾಲೆ ತಯಾರಕರು, ಅಗಸರು (ದೋಬಿ, ಆಭರಣ ತಯಾರಕರು, ಶಿಂಪಿಗ (ಬಟ್ಟೆ ಹೊಲೆಯುವರು), ಕುಂಬಾರ ವೃತ್ತಿ ಮಾಡುವವರು, ಮೀನು ಬಲೆ ಹೆಣೆಯುವವರು, ಶಿಲ್ಪಿ (ಮೂರ್ತಿ ಮತ್ತು ಕಲ್ಲಿನ ಕೆತ್ತನೆ) ಚಮ್ಮಾರ, ಪಾದರಕ್ಷೆ ತಯಾರಕರು, ಬೀಗ ತಯಾರಿಕ ಕುಶಲಕರ್ಮಿಗಳಿಗೆ ಭಾರತ ಸರ್ಕಾರ ಹೊಸ ಯೋಜನೆಯಾದ ಪಿ.ಎಂ. ವಿಶ್ವಕರ್ಮ ಯೋಜನೆಯಡಿಯಲ್ಲಿ ಹಣಕಾಸು ಸಂಸ್ಥೆಗಳ ಮೂಲಕ ರೂ.1 ಲಕ್ಷದವರೆಗೆ ಶೇ.5 ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯುವುದಾಗಿ ಮತ್ತು ರೂ.15 ಸಾವಿರದವರೆಗಿನ ಮೊತ್ತದ ಸುಧಾರಿತ ಉಪಕರಣಗಳನ್ನು ನೀಡಲು ಅವಕಾಶವಿದೆಯೆಂದು ತಿಳಿಸಿದರು.
ಕುಶಲಕರ್ಮಿಗಳು https://pmvishwakarma.gov.in ವೆಬ್‍ಸೈಟ್‍ನಲ್ಲಿ ಸ್ಥಳೀಯ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನೋಂದಾಯಿಸಿಕೊಂಡು ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಸವಿತಾ ಸಮಾಜ, ವಿಶ್ವಕರ್ಮ ಸಮಾಜ, ಬಡಗಿತನ ಸಂಘದ, ತರಗಾರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಇತರೆ ಕುಶಲಕರ್ಮಿಗಳ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕು ಇದ್ದರು.