ಹೊಸಪೇಟೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿ.ಎಚ್.ಡಿ. ಅಧ್ಯಯನ ಪ್ರಾರಂಭಿಸಿರುವ ಹಿಂದುಳಿದ ವರ್ಗಗಳ ಅರ್ಹ ಹೊಸ ಅಭ್ಯರ್ಥಿಗಳಿಂದ ಮಾಸಿಕ ವ್ಯಾಸಂಗ ವೇತನಕ್ಕಾಗಿ (ಫೆಲೋಶಿಪ್) ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ)ಗೆ ಸೇರಿರಬೇಕು. ಕರ್ನಾಟಕದ ಶಾಸನಬದ್ಧ ವಿಶ್ವವಿದ್ಯಾಲಯಗಳಲ್ಲಿ ಅಥವಾ ಅಧೀನಕ್ಕೆ ಒಳಪಡುವ ಸಂಸ್ಥೆಗಳಲ್ಲಿ 2023ರ ಜನವರಿ 30 ಮತ್ತು ಅದರ ನಂತರ ಪ್ರಥಮ ವರ್ಷದ ಪಿ.ಎಚ್.ಡಿ ಅಧ್ಯಯನ ಪ್ರಾರಂಭಿಸಿರಬೇಕು. ಹೊಸ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕಗಳನ್ನು ಪಡೆದಿರಬೇಕು. ಅಭ್ಯರ್ಥಿಗಳು ಪೂರ್ಣಾವಧಿ ಪಿಎಚ್.ಡಿ ಅಧ್ಯಯನಕ್ಕಾಗಿ ಮಾಡಿಸುವ ನೋಂದಣಿ ದಿನಾಂಕವು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುವ ವ್ಯಾಸಂಗ ವೇತನ (ಫೆಲೋಶಿಪ್) ಕ್ಕಾಗಿ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಹಿಂದಿನ ಎರಡು ವರ್ಷದೊಳಗಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಾಲಿನಿಂದ ಪ್ರಥಮ ವರ್ಷ ಪಿ.ಎಚ್.ಡಿ ಅಧ್ಯಯನದಲ್ಲಿ ತೊಡಗಿರಬೇಕು. ಅಭ್ಯರ್ಥಿ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯ ಪ್ರವರ್ಗ-1ಕ್ಕೆ ರೂ. 4.50 ಲಕ್ಷ ಮತ್ತು 2(ಎ), 3(ಎ) ಹಾಗೂ 3(ಬಿ)ಗೆ 3.50 ಲಕ್ಷ ಮಿತಿಯಲ್ಲಿರಬೇಕು.
ಅರ್ಜಿ ಸಲ್ಲಿಸಲು 2024ರ ಜನವರಿ 6 ಕೊನೆಯ ದಿನವಾಗಿದ್ದು, ಇಲಾಖಾ ವೆಬ್ ಸೈಟ್ https://bcwd.karnataka.gov.in/ ನಲ್ಲಿ ಹೆಚ್ಚಿನ ವಿವರಗಳ ಮಾಹಿತಿಯನ್ನು ಓದಿ ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 8050770004 ಹಾಗೂ ಜಿಲ್ಲಾ ಕಚೇರಿ ದೂ.ಸಂ: 8394796292 ಗೆ ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
				 
         
         
         
															 
                     
                     
                     
                     
                    


































 
    
    
        