ಪುಣೆ : ಪೋರ್ಶೆ ಕಾರು ಡಿಕ್ಕಿ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಹೊರಬಿದ್ದಿದೆ. ಪುತ್ರನ ರಕ್ಷಿಸಲು ತನ್ನ ರಕ್ತದ ಮಾದರಿ ನೀಡಿದ್ದ ಆರೋಪಿಯ ತಾಯಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
ಮೇ 19ರಂದು ಪುಣೆಯ ದೊಡ್ಡ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಕುಟುಂಬಕ್ಕೆ ಸೇರಿದ ತರುಣನು ತನ್ನ ನಂಬರ್ ಪ್ಲೇಟ್ ಇಲ್ಲದ ಪೋರ್ಶೆ ಕಾರನ್ನು ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿ ಇಬ್ಬರು ಅಮಾಯಕರು ಸಾವನ್ನಪ್ಪಿದ್ದರು.
ಅಪಘಾತದ ಬಳಿಕ ಸಂಗ್ರಹಿಸಲಾದ ತರುಣನ ರಕ್ತದ ಮಾದರಿಗಳನ್ನು ಸಸೂನ್ ಸರಕಾರಿ ಆಸ್ಪತ್ರೆಯ ವೈದ್ಯರು ಬದಲಿಸಿರುವುದು ಪತ್ತೆಯಾಗಿತ್ತು.
ರಕ್ತದಲ್ಲಿನ ಆಲ್ಕೊಹಾಲ್ ಪ್ರಮಾಣವನ್ನು ಪತ್ತೆಹಚ್ಚುವುದಕ್ಕಾಗಿ ಆರೋಪಿಯ ರಕ್ತದ ಮಾದರಿಗಳನ್ನುವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವಾಗ ಬೇರೆ ವ್ಯಕ್ತಿಯ ರಕ್ತದ ಮಾದರಿಗಳನ್ನು ಕಳುಹಿಸಲಾಗಿತ್ತು.
ಆರೋಪಿಯ ರಕ್ತದ ಮಾದರಿಗಳ ಬದಲಿಗೆ ಆತನ ತಾಯಿಯ ರಕ್ತದ ಮಾದರಿಗಳನ್ನು ಕಳುಹಿಸಲಾಗಿತ್ತು ಎಂದು ಪುಣೆ ಪೊಲೀಸ್ ಕಮಿಶನರ್ ಅಮಿತೇಶ್ ಕುಮಾರ್ ಹೇಳಿದ್ದಾರೆ.