ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋಗಳಿರುವ ಪೆನ್‌ಡ್ರೈವ್ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪೆನ್ ಡ್ರೈವ್ ಹಂಚಿದವರ ಪತ್ತೆಗೆ ಹಾಸನ ಜಿಲ್ಲೆಯ ಒಟ್ಟು 18 ಕಡೆ ಎಸ್‌ಐಟಿ ತಂಡ ಸಿಸಿ ಕೆಮರಾ ಪರಿಶೀಲನೆ ನಡೆಸಿದೆ.
ಆರೋಪಿಗಳ ನಿವಾಸ ಹಾಗೂ ಕಚೇರಿಯಿಂದ ಪೆನ್‌ಡ್ರೈವ್, ಹಾರ್ಡ್‌ಡಿಸ್ಕ್, ಕಂಪ್ಯೂಟರ್‌ಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ. 7 ಪೆನ್‌ಡ್ರೈವ್, 6 ಹಾರ್ಡ್‌ಡಿಸ್ಕ್, 4 ಲ್ಯಾಪ್‌ಟಾಪ್, 3 ಡೆಸ್ಕ್ಟಾಪ್‌ಗ್ಳು ಸಹಿತ ಹಲವು ಸಿಸಿಕೆಮರಾಗಳನ್ನೂ ಎಸ್‌ಐಟಿ ತಂಡ ವಶಕ್ಕೆ ಪಡೆದಿದೆ.
ಎಸ್‌ಐಟಿ ವಶಕ್ಕೆ ಪಡೆದುಕೊಂಡ ಎಲೆಕ್ಟ್ರಾನಿಕ್ ಹಾರ್ಡ್ ಡಿಸ್ಕ್ ಗಳಲ್ಲಿ ವೀಡಿಯೋಗಳು ಸಂಗ್ರಹವಾಗಿದ್ದವೆ? ಸಂಗ್ರಹವಾಗಿದ್ದು ಡಿಲೀಟ್ ಆಗಿವೆಯೇ ಎಂಬುದರ ಬಗ್ಗೆ ಪರಿಶೀಲನೆಗೆ ಎಫ್ಎಸ್‌ಎಲ್‌ಗೆ ಕಳುಹಿಸಲಾಗಿದೆ ಎನ್ನಲಾಗಿದೆ.
ಈಗಾಗಲೇ ಕೆಲವರ ಚಲನವಲನಗಳ ಬಗ್ಗೆ ಕೆಮರಾಗಳಲ್ಲಿ ಎಸ್‌ಐಟಿ ತಂಡ ಪರಿಶೀಲಿಸಲಾಗುತ್ತಿದೆ. ಮೊದಲು ಕಂಪ್ಯೂಟರ್‌ಗೆ ಕಾಪಿ ಮಾಡಿ ಬೇರೆ ಬೇರೆ ಮೊಬೈಲ್‌ಗಳಿಗೆ ಹಲವರು ಕಾಪಿ ಮಾಡಿಕೊಂಡು ಹೋಗಿರುವ ಮಾಹಿತಿ ಎಸ್ಐಟಿಗೆ ಲಭ್ಯವಾಗಿದೆ. ಕಾಪಿ ಮಾಡಲು ಬಂದು ಹೋದವರ ಕುರಿತು ಎಸ್ಐಟಿ ತನಿಖೆ ನಡೆಸುತ್ತಿದೆ.