ನವದೆಹಲಿ: ಅಶ್ಲೀಲ ಪೆನ್‌ಡ್ರೈವ್ ಹಂಚಿಕೆ ಮಾಡಿ ನಮ್ಮ ಕುಟುಂಬವನ್ನು ನಾಶ ಮಾಡಲು ಹೊರಟ ಪ್ರೀತಮ್ ಗೌಡನನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಮಾಡಲು ಮುಂದಾಗಿದ್ದಾರೆ. ಬಿಜೆಪಿಯವರು ಈ ಪಾದಯಾತ್ರೆಗೆ ನನ್ನನ್ನು ಕರೆಯುತ್ತೀರಾ? ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶಿತರಾಗಿದ್ದಾರೆ. ಮುಡಾ ಹಗರಣದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಮೈಸೂರಿಗೆ ಜಂಟಿಯಾಗಿ ಪಾದಯಾತ್ರೆ ಮಾಡಲಿದೆ ಎನ್ನಲಾಗಿತ್ತು. ಈ ಪಾದಯಾತ್ರೆಯ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ. ದೇವೇಗೌಡರ ಕುಟುಂಬ ನಾಶ ಮಾಡಲು ಹೊರಟ ಮಾಜಿ ಶಾಸಕ ಪ್ರೀತಮ್ ಗೌಡನನ್ನು ಸಭೆಯಲ್ಲಿ ಕೂರಿಸಿಕೊಂಡು, ನನ್ನ ಸಭೆ ಕರೆಯುತ್ತೀರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಪೆನ್ ಡ್ರೈವ್ ಹಂಚಿದೋರು ಯಾರು ಅಂಥ ಗೊತ್ತಿಲ್ವಾ ಎಂದು ಕೇಳಿರುವ ಹೆಚ್‌ಡಿಕೆ ಪಾದಯಾತ್ರೆ ಸಂಘಟಿಸಿದ ಬಿಜೆಪಿ ನಾಯಕರ ವಿರುದ್ದ ಎಚ್‌ಡಿಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇರಳದಲ್ಲಿ ನೂರಾರು ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲೂ ಮಳೆಯಿಂದ ಹಲವು ಜಿಲ್ಲೆಗಳು ಜಲಾವೃತಗೊಂಡಿವೆ. ಮಂಡ್ಯ ಭಾಗದಲ್ಲಿ ನಾಟಿ ಕೆಲಸ ಶುರುವಾಗಲಿದೆ. ಈ ಹಿನ್ನಲೆಯಲ್ಲಿ ಜಿ.ಟಿ ದೇವಗೌಡರ ನೇತೃತ್ವದಲ್ಲಿ ಕೋರ್ ಕಮಿಟಿ ಸದಸ್ಯರು ಪಾದಯಾತ್ರೆಯಲ್ಲಿ ಭಾಗಿಯಾಗಬಾರದು ಎಂದು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.