ನವದೆಹಲಿ: ಅಮೆರಿಕದ ದೈತ್ಯ ಉದ್ಯಮಿ ಹಾಗೂ ಜಾಗತಿಕ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿರುವ ವಾರನ್ ಬಫೆಟ್ ಅವರು ಪೇಟಿಎಂನಿಂದ 600 ಕೋಟಿ ನಷ್ಟದೊಂದಿಗೆ ಹೊರಬಂದಿದ್ದಾರೆ. ವಾರನ್ ಬಫೆಟ್ ಅವರ ಬರ್ಕ್‌ಷೈರ್ ಹಾಥ್‌ವೇ ಕಂಪನಿ ಪೇಟಿಎಮ್‌ನಲ್ಲಿ ಹೊಂದಿದ್ದ 2.5% ಷೇರ್‌ಅನ್ನು 1370 ಕೋಟಿ ರೂಪಾಯಿ ಬ್ಲಾಕ್ ಡೀಲ್‌ನಲ್ಲಿ ಮಾರಾಟ ಮಾಡಿದೆ. ಪೇಟಿಎಂನ ಮೂಲ ಕಂಪನಿಯಾದ One97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನಲ್ಲಿನ ತನ್ನ ಸಂಪೂರ್ಣ ಪಾಲನ್ನು ಶುಕ್ರವಾರ ದೊಡ್ಡ ಬ್ಲಾಕ್ ಡೀಲ್‌ನಲ್ಲಿ 600 ಕೋಟಿ ರೂಪಾಯಿಗೂ ಹೆಚ್ಚು ನಷ್ಟದೊಂದಿಗೆ ಮಾರಾಟ ಮಾಡಿದೆ. ಪೇಟಿಎಂ ಕಂಪನಿಯಲ್ಲಿ ಖರೀದಿ ಮಾಡಿದ್ದ ಶೇ. 2.5ರಷ್ಟು ಅಂದರೆ 1.56 ಕೋಟಿ ಷೇರುಗಳನ್ನು ಬರ್ಕ್‌ಷೈರ್ ಹ್ಯಾತ್‌ವೇ ಮಾರಾಟ ಮಾಡಿದೆ. ಪ್ರತಿ ಷೇರುಗಳಿಗೆ 877.29 ರೂಪಾಯಿಯಂತೆ 1370 ಕೋಟಿ ರೂಪಾಯಿಗೆ ಈ ಎಲ್ಲಾ ಷೇರುಗಳನ್ನು ಮಾರಾಟ ಮಾಡಲಾಗಿದೆ. 2018ರಲ್ಲಿ ವಿಜಯ್ ಶೇಖರ್ ಶರ್ಮ ಮಾಲೀಕತ್ವದ ಪೇಟಿಎಂನ ಮೂಲ ಕಂಪನಿಯಾದ ಒನ್ 97 ಕಮ್ಯುನಿಕೇಷನ್‌ನಲ್ಲಿ ಶೇ. 2.6ರಷ್ಟು ಷೇರುಗಳನ್ನು ವಾರನ್ ಬಫೆಟ್ ಖರೀದಿ ಮಾಡಿದ್ದರು. ಐಪಿಓ ವೇಳೆ ಕಂಪನಿಯ ಮೌಲ್ಯವನ್ನು 10 ರಿಂದ 12 ಬಿಲಿಯನ್ ಯುಎಸ್ ಡಾಲರ್ ಎಂದು ಹೇಳಲಾಗಿದ್ದರಿಂದ ಪ್ರತಿ ಷೇರಿಗೆ 2200 ರೂಪಾಯಿಯಂತೆ 300 ಮಿಲಿಯನ್ ಯುಎಸ್ ಡಾಲರ್‌ಗೆ ಷೇರುಗಳನ್ನು ಖರೀದಿ ಮಾಡಿತ್ತು. ಪೇಟಿಎಂ ಐಪಿಓ ವೇಳೆ ಬರ್ಕ್‌ಷೈರ್ ಹಾಥ್‌ವೇ ಕಂಪನಿ 220 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿತ್ತು.