ನವದೆಹಲಿ: ಸಾಮಾನ್ಯವಾಗಿ ಜನಪ್ರತಿನಿಧಿಗಳು ಪೇಪರ್ ನೋಡಿಕೊಂಡೇ ಪ್ರಮಾಣ ವಚನ ಸ್ವೀಕರಿಸಿಸುತ್ತಾರೆ. ಆದರೆ ಪೇಪರ್ ನೋಡದೇ ಈ ಬಾರಿ ಅತ್ಯಂತ ಕಿರಿಯ ಸಂಸದೆಯೊಬ್ಬರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಪೇಪರ್ ನೋಡದೇ ಶಾಂಭವಿ ಚೌಧರಿ ಎಂಬ ಅತ್ಯಂತ ಕಿರಿಯ ಸಂಸದೆ ಪ್ರಮಾಣವಚನ ಸ್ವೀಕರಿಸಿದ್ದು, ಇದೀಗ ಈ ಸುದ್ದಿ ವೈರಲ್ ಆಗುತ್ತಿದೆ. ಕೇವಲ 26ನೇ ವಯಸ್ಸಿಗೆ ಸಂಸದೆಯಾಗಿರುವ ಅವರು, ಹಿಂದಿಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಶಾಂಭವಿ ಅವರು ಪ್ರಮಾಣವಚನ ಸ್ವೀಕಾರ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಸದೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಡಿಯೋದಲ್ಲಿ ಶಾಂಭವಿ ಅವರು ಪೇಪರ್ ನೋಡದೆಯೇ ಸಭೆಯನ್ನು ನೋಡಿಕೊಂಡೇ ಪ್ರಮಾಣ ವಚನ ಸ್ವೀಕಾರ ಮಾಡುವುದನ್ನು ಕಾಣಬಹುದಾಗಿದೆ.
ಶಾಂಭವಿ ಅವರು ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ(ಎಲ್ ಜೆಪಿ) ಅಭ್ಯರ್ಥಿಯಾಗಿ ಬಿಹಾರದ ಸಮಸ್ತಿಪುರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿರುತ್ತಾರೆ. ಇನ್ನು ಶಾಂಭವಿ ಅವರು ನಿತೀಶ್ ಕುಮಾರ್ ಅವರ ಕ್ಯಾಬಿನೆಟ್ ನಲ್ಲಿ ಅತ್ಯಂತ ಪ್ರಭಾವಶಾಲಿ ಮಂತ್ರಿಗಳಲ್ಲಿ ಒಬ್ಬರಾಗಿದ್ದ ಜೆಡಿಯು ನಾಯಕರಾದ ಅಶೋಕ್ ಚೌಧರಿ ಅವರ ಪುತ್ರಿಯಾಗಿದ್ದಾರೆ.