ಪೈನಾಪಲ್‌ ಹಣ್ಣಿನ ಆರೋಗ್ಯ ಪ್ರಯೋಜನಗಳು

ಪೈನಾಪಲ್‌ ರುಚಿಕರ ಹಾಗೂ ಆರೋಗ್ಯಕರವಾದ ಹಣ್ಣಾಗಿದ್ದು ಸುಲಭ ಬೆಲೆಯಲ್ಲಿ ವರ್ಷದ ಎಲ್ಲಾ ಸಮಯದಲ್ಲಿ ಸಿಗುವ ಫಲವಾಗಿದೆ. ಇದನ್ನು ಹಾಗೇ ತಿನ್ನುವ ಹೊರತಾಗಿ ರಸ ಹಿಂಡಿ ಸೇವಿಸಬಹುದು ಹಾಗೂ ಹಣ್ಣಿನ ತಿರುಳನ್ನು ಬಳಸಿ ಗೊಜ್ಜು, ಕೇಸರಿಬಾತ್ ಮೊದಲಾದ ಖಾದ್ಯಗಳಲ್ಲಿ ಬೆರೆಸಿಯೂ ಸೇವಿಸಬಹುದು. ಹಾಗೇ ತಿನ್ನಬಹುದು ಅಥವಾ ಉಪ್ಪು ಖಾರ ಬೆರೆಸಿ ಅಥವಾ ಚಾಟ್ ಮಸಾಲಾ ಚಿಮುಕಿಸಿ ತಿನ್ನಬಹುದು. ನೆಲದ ಮೇಲೆ ಗಿಡ, ಗಿಡದ ಮೇಲೆ ಫಲ, ಫಲದ ಮೇಲೆ ಗಿಡ, ಈ ಕನ್ನಡದ ಒಗಟನ್ನು ಬಿಡಿಸಿ ನೋಡೋಣ, ಉತ್ತರ: ಅನಾನಾಸು.ನಮ್ಮ ಒಗಟಿನಲ್ಲಿಯೇ ಈ ಹಣ್ಣು ಜೀವ ತಳೆದಿರಬೇಕಾದರೆ ಇದು ಭಾರತದ ಪಾಲಿಗೆ ನೂರಾರು ವರ್ಷಗಳ ಹಿಂದೆಯೇ ಬಂದಿರಬೇಕು. ಅನಾನಸ್ ಕೇವಲ ಸಕ್ಕರೆಭರಿತ ಹಣ್ಣು ಅಲ್ಲ, ಬದಲಿಗೆ ಹಲವಾರು ಪೋಷಕಾಂಶಗಳನ್ನೂ, ಫೈಟೋ ನ್ಯೂಟ್ರಿಯೆಂಟ್ ಗಳನ್ನೂ ಹೊಂದಿರುವ ಫಲವಾಗಿದ್ದು ಇದರ ಸೇವನೆಯಿಂದ ಫಲವತ್ತತೆ ಹೆಚ್ಚುವುದು, ಉರಿಯೂತ ನಿವಾರಣೆಯಾಗುವುದು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆ ತಗ್ಗುವುದು ಮೊದಲಾದ ಪ್ರಯೋಜನಗಳನ್ನು ಪಡೆಯಬಹುದು. ಬನ್ನಿ ಹಣ್ಣಿನ ಇನ್ನಷ್ಟು ಆರೋಗ್ಯಕಾರಿ ಪ್ರಯೋಜನಗಳು ಏನು ಎಂಬುದನ್ನು ನೋಡೋಣ.. ಬ್ರೋಮಿಲೈನ್ ಪೋಷಕಾಂಶಕ್ಕೆ ಕ್ಯಾನ್ಸರ್ ವಿರುದ್ದ ಹೊರಾಡುವ ಗುಣವಿದೆ ಎಂದು ಸಂಶೋಧನೆಯಲ್ಲಿ ಈಗಾಗಲೇ ಸಾಬೀತುಗೊಳಿಸಲಾಗಿದೆ. ಹೇಗೆ ಎಂದರೆ, ಕ್ಯಾನ್ಸರ್ ಪೀಡಿತ ಜೀವಕೋಶಗಳು ಆರೋಗ್ಯಕರ ಜೀವಕೋಶಗಳನ್ನು ಕ್ಯಾನ್ಸರ್ ಗೆ ಒಳಪಡಿಸಲು ತಡೆಯೊಡ್ಡುವ ಅಪೋಪ್ಟೋಸಿಸ್ ಎಂಬ ಕ್ರಿಯೆಗೆ ಈ ಬ್ರೋಮಿಲೈನ್ ಪ್ರಚೋದನೆ ನೀಡುತ್ತದೆ. ತನ್ಮೂಲಕ ಕ್ಯಾನ್ಸರ್ ಉಂಟುಮಾಡುವ ಜೀವಕೋಶಗಳ ಮೇಲೆ ಧಾಳಿ ಎಸಗಿ ಆರೋಗ್ಯಕರ ಜೀವಕೋಶಗಳನ್ನು ಮಾತ್ರ ಉಳಿಸಿಕೊಳ್ಳುತ್ತದೆ. ಅನಾನಾಸಿನಲ್ಲಿ ಬೀಟಾ ಕ್ಯಾರೋಟೀನ್ ಎಂಬ ಪೋಷಕಾಂಶಗಳೂ ಉತ್ತಮ ಪ್ರಮಾಣದಲ್ಲಿವೆ. ಇವು ಅಸ್ತಮಾ ರೋಗ ಆವರಿಸುವುದರಿಂದ ತಡೆ ಒಡ್ಡುತ್ತವೆ. ಅಲ್ಲದೇ ಅನಾನಾಸಿನ ನಿಯಮಿತ ಸೇವನೆಯಿಂದ ದೇಹದಲ್ಲಿರುವ ಕಲ್ಮಶಗಳನ್ನು ನಿವಾರಿಸಿ ಉರಿಯೂತದ ವಿರುದ್ದ ಹೋರಾಡುವ ಮೂಲಕ ಆರೋಗ್ಯವನ್ನು ವೃದ್ದಿಸುತ್ತದೆ. ರೋಗ ನಿರೋಧಕ ಶಕ್ತಿ ಉತ್ತಮವಾಗಿರಬೇಕೆಂದರೆ ವಿಟಮಿನ್ ಸಿ ಅಗತ್ಯವಾಗಿ ಬೇಕು. ಈ ಪೋಷಕಾಂಶಕ್ಕೆ ಇನ್ನೂ ಹಲವಾರು ಬಗೆಯ ಜವಾಬ್ದಾರಿಗಳಿವೆ. ಅನಾನಾಸಿನಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದೆ. ಅನಾನಾಸಿನ ಸೇವನೆಯಿಂದ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ ಹಾಗೂ ತನ್ಮೂಲಕ ಶೀತ, ಕೆಮ್ಮು ಜ್ವರ ಮೊದಲಾದ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ಮೂಲಕ ಎದುರಾಗುವ ಸೋಂಕುಗಳಿಂದ ರಕ್ಷಿಸುತ್ತದೆ. ಅಷ್ಟೇ ಅಲ್ಲ, ವಿಟಮಿನ್ ಸಿ ಚರ್ಮದ ಆರೈಕೆಗೂ ನೆರವಾಗುತ್ತದೆ. ವಿಶೇಷವಾಗಿ ಬಿಸಿಲಿನ ಆಘಾತಕ್ಕೆ ಒಳಗಾಗಿ ಉರಿ ಎದುರಾಗಿದ್ದ ಚರ್ಮ ಶೀಘ್ರವೇ ಗುಣವಾಗಲು ವಿಟಮಿನ್ ಸಿ ನೆರವಾಗುತ್ತದೆ. ಅನಾನಾಸನ್ನು ಆಹಾರದ ಜೊತೆಗೆ ಸೇವಿಸುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ವಿಶೇಷವಾಗಿ ಪ್ರೋಟೀನುಗಳು ಒಡೆಯಲ್ಪಟ್ಟು ಪೆಪ್ಟೈಟ್ ಮತ್ತು ಅಮೈನೋ ಆಮ್ಲಗಳಾಗಲು ಅನಾನಾಸಿನಲ್ಲಿರುವ ಪೋಷಕಾಂಶಗಳು ನೆರವಾಗುತ್ತವೆ. ಅಲ್ಲದೇ ಅನಾನಾಸಿನಲ್ಲಿ ಉತ್ತಮ ಪ್ರಮಾಣದ ಕರಗುವ ನಾರು, ನೀರಿನಂಶ ಮತ್ತು ಎಲೆಕ್ಟ್ರೋಲೈಟುಗಳಿವೆ. ಇವು ಕರುಳುಗಳಲ್ಲಿ ಆಹಾರದ ಚಲನೆಯನ್ನು ಸುಲಭಗೊಳಿಸುತ್ತವೆ ಹಾಗೂ ಕರುಳಿನ ಹುಣ್ಣು ಮತ್ತು ಆಮ್ಲೀಯತೆ ಉಂಟಾಗುವುದರಿಂದ ರಕ್ಷಣೆ ಒದಗಿಸುತ್ತವೆ. ಜೀರ್ಣಕ್ರಿಯೆಗೆ ನೆರವಾಗುವ ಜೊತೆಗೇ ಅನಾನಾಸು ಮನೋಭಾವವನ್ನೂ ಉತ್ತಮಗೊಳಿಸುವುದನ್ನು ಕಂಡುಕೊಳ್ಳಲಾಗಿದೆ. ಖಿನ್ನತೆ, ಉದ್ವೇಗ, ಮಾನಸಿಕ ಒತ್ತಡ ಮೊದಲಾದ ಮೆದುಳಿಗೆ ಸಂಬಂಧಿಸಿದ ತೊಂದರೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಅನಾನಾಸನ್ನು ಸೇವಿಸಲು ನೀಡಿದಾಗ ಇವರ ಮನೋಭಾವ ಉತ್ತಮಗೊಂಡು ಈ ತೊಂದರೆಗಳು ಸಾಕಷ್ಟು ಮಟ್ಟಿಗೆ ಕಡಿಮೆಯಾಗಿರುವುದನ್ನು ಕೆಲವು ಅಧ್ಯಯನಗಳಲ್ಲಿ ಕಂಡುಕೊಳ್ಳಲಾಗಿದೆ.ಅನಾನಸಿನಲ್ಲಿರುವ ಟ್ರಿಪ್ಟೋಫ್ಯಾನ್ ಎಂಬ ಪೋಷಕಾಂಶ ಮೆದುಳಿನಲ್ಲಿ ಸೆರೋಟೋನಿನ್ ಎಂಬ ರಸದೂತವನ್ನು ಸ್ರವಿಸಲು ಪ್ರಚೋದನೆ ನೀಡುತ್ತದೆ. ಈ ಸೆರೋಟೋನಿನ್ ಮೆದುಳನ್ನು ನಿರಾಳಗೊಳಿಸುವ ರಸದೂತವಾಗಿದ್ದು ಖಿನ್ನತೆ ಉದ್ವೇಗ ಮೊದಲಾದವುಗಳನ್ನು ಇಲ್ಲವಾಗಿಸಲು ನೆರವಾಗುತ್ತದೆ. ಅನಾನಾಸು ರುಚಿಕರ ಮತ್ತು ಆರೋಗ್ಯಕರ ಎಂದಾಕ್ಷಣ ಎಷ್ಟು ಬೇಕಾದರೂ ತಿನ್ನಬಹುದು ಎಂದು ಅರ್ಥವಲ್ಲ. ವಾಸ್ತವದಲ್ಲಿ ಸುಮಾರು ನೂರು ಗ್ರಾಂ ನಷ್ಟು ಹಣ್ಣಿನ ತಿರುಳಿನಲ್ಲಿ ದಿನದ ಅಗತ್ಯದ 131 ಶೇಖಡಾದಷ್ಟು ವಿಟಮಿನ್ Cನಮಗೆ ದೊರಕಿಬಿಡುತ್ತದೆ. ಹಾಗಾಗಿ ಒಂದು ದಿನದಲ್ಲಿ ಸುಮಾರು ಎಂಭತ್ತು ಗ್ರಾಂ ಗಿಂತ ಹೆಚ್ಚಿನ ಪ್ರಮಾಣದ ಅನಾನಾಸು ಸೇವಿಸಬಾರದು! ಇದೇ ಕಾರಣಕ್ಕೆ ಈ ಹಣ್ಣಿನ ಮಿತ ಪ್ರಮಾಣವನ್ನು ಇತರ ಅಹಾರಗಳೊಂದಿಗೆ ಬೆರೆಸಿ ಸೇವಿಸುವುದೇ ಆರೋಗ್ಯಕರವಾಗಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement