ಬೆಂಗಳೂರು: ಕುಡಿದು ಕಾರು ಚಲಾಯಿಸಿದಲ್ಲದೇ ಪೊಲಿಸ್ ಅಧಿಕಾರಿಯೊಬ್ಬರಿಗೆ ನೀನು ಮುಸ್ಲಿಂ ಎಂದು ಧರ್ಮ ನಿಂಧನೆ ಮಾಡಿದ ಆರೋಪದ ಮೇಲೆ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರ ಆ್ಯಡಂ ಬಿದ್ದಪ್ಪ ವಿರುದ್ಧ ನಗರದ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯದ ಅಮಲಿನಲ್ಲಿ ಅಸಭ್ಯ ವರ್ತನೆ ಪ್ರದರ್ಶಿಸಿ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ್ದಲ್ಲದೇ, ಅಧಿಕಾರಿಯೊಬ್ಬರಿಗೆ ʼಪೊಲೀಸ್ ಅಧಿಕಾರಿ ಮುಸ್ಲಿಂʼ ಎಂದು ಧರ್ಮವನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದ ಮೇಲೆ ಆ್ಯಡಂ ಬಿದ್ದಪ್ಪ ವಿರುದ್ಧ ಐಪಿಸಿ ಸೆಕ್ಷನ್ 295ಎ ಅಡಿಯಲ್ಲಿ ಧರ್ಮ ನಿಂದನೆ ಪ್ರಕರಣ ದಾಖಲಿಸಲಾಗಿದೆ.
ಕಳೆದ ವಾರ, ಟ್ರಾಫಿಕ್ ಪೊಲೀಸರು ಕುಡಿದು ವಾಹನ ಚಾಲನೆ ಮಾಡಿದ ಮತ್ತು ರೋಡ್ ರೇಜ್ ಪ್ರಕರಣಗಳಲ್ಲಿ ಆ್ಯಡಂ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದರು. ಈಗ ಆ್ಯಡಂ ಪೊಲೀಸ್ ಅಧಿಕಾರಿಯ ಧರ್ಮವನ್ನು ಅವಮಾನಿಸಿದ ವಿಡಿಯೋ ವೈರಲ್ ಆಗಿದದ್ದು, ಈ ಸಂಬಂಧ ಮತ್ತೊಂದು ಕೇಸ್ ದಾಖಲಿಸಲಾಗಿದೆ. ಎಲ್ಲಾ ಮೂರು ಪ್ರಕರಣಗಳು ಒಂದೇ ಘಟನೆಗೆ ಸಂಬಂಧಿಸಿವೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಗೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ 45 ವರ್ಷದ ಗೌಸ್ ಪಾಷಾ ಆ್ಯಡಂ ವಿರುದ್ಧ ದೂರು ನೀಡಿದ್ದಾರೆ.
ಅಕ್ಟೋಬರ್ 25ರ ರಾತ್ರಿ ಯಲಹಂಕದ ರೈಲ್ ವೀಲ್ ಫ್ಯಾಕ್ಟರಿ ಬಳಿ ಆ್ಯಡಂ ಬಿದ್ದಪ್ಪ ಅವರು ಅಪಾಯಕಾರಿಯಾಗಿ ಕಾರು ಚಲಾಯಿಸಿಕೊಂಡು ಬಂದು ರಾಹುಲ್ ಎಂಬಾತನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದರು. ಈ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಕಾರು ಚಲಾಯಿಸುತ್ತಿದ್ದ ಆರೋಪಿ ಬಳಿಗೆ ಬಂದು ಪ್ರಶ್ನಿಸಿದಾಗ, ಆರೋಪಿ ಆ್ಯಡಂ ಬಿದ್ದಪ್ಪ ಅಧಿಕಾರಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ಈ ವೇಳೆ ಆ್ಯಡಂ ‘ಗೌಸ್, ಗೌಸ್ ಪಾಷಾ, ಒಬ್ಬ ಮುಸ್ಲಿಂ’ ಎನ್ನುತ್ತಾ ಪೋಲೀಸರ ಮೇಲೆ ಉಗುಳುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ