ಬೆಂಗಳೂರು: ಪೊಲೀಸರು ಪಾರದರ್ಶಕವಾಗಿ ಕೆಲಸ ನಿರ್ವಹಿಸಬೇಕು. ಇನ್ನು ಮುಂದೆ ಯಾರಾದರೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದರೆ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಪೊಲೀಸರಿಗೆ ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳೊಂದಿಗೆ ಶಾಮೀಲಾಗುವುದು, ಅಪರಾದ ಪ್ರಕರಣಗಳಲ್ಲಿ ಭಾಗಿಯಾಗುವುದು ಸರಿಯಲ್ಲ. ಇದರಿಂದ ಜನರಿಗೆ ಪೊಲೀಸ್ ವ್ಯವಸ್ಥೆ ಮೇಲೆ ಕೀಳದ ಭಾವನೆಗಳು ಮೂಡುತ್ತದೆ ಎಂದರು.
ಬೆಂಗಳೂರು ನಗರದಲ್ಲಿ ರೌಡಿಸಂ ಅನ್ನು ಮಟ್ಟ ಹಾಕಬೇಕು. ಸಂಪೂರ್ಣವಾಗಿ ಅಪರಾಧ ನಿರ್ಮೂಲನೆ ಮಾಡಲಾಗದಿದ್ದರೂ, ಕಡಿಮೆಗೊಳಿಸಲು ಪೊಲೀಸರು ಹೆಚ್ಚಿನ ಆದ್ಯತೆ ನೀಡಬೇಕು. ಯಾರಿಗೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡಬಾರದು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜತೆಗೆ ಶಾಂತಿಯುತ ಹಾಗೂ ಭಯವಿಲ್ಲದ ವಾತಾವರಣ ನಿರ್ಮಿಸಲು ಬೆಂಗಳೂರು ನಗರ ಪೊಲೀಸರು ಶ್ರಮಪಡಬೇಕು. ಇನ್ನು ಪೊಲೀಸ್ ಬೀಟ್, ಹೊಯ್ಸಳ ಗಸ್ತುಪಡೆಗಳನ್ನು ಹೆಚ್ಚಿನ ಮಟ್ಟದಲ್ಲಿ ಬಲಪಡಿಸಬೇಕು ಎಂದು ಸೂಚನೆ ನೀಡಿದರು.