ಮಂಗಳೂರು: ಇತ್ತೀಚೆಗೆ ಸೈಬರ್ ಫ್ರಾಡ್ ವಿವಿಧ ರೀತಿಯಲ್ಲಿ ನಡೆಯುತ್ತಿದೆ. ಜನರನ್ನು ವಂಚನೆಗೊಳಿಸಿ ಸುಲಭವಾಗಿ ದುಡ್ಡು ಮಾಡುತ್ತಿದ್ದ ಸೈಬರ್ ದಂಧೆಕೋರರು ಇದೀಗ ಮಂಗಳೂರು ಪೊಲೀಸ್ ಕಮಿಷನರ್ ಹೆಸರಲ್ಲಿಯೇ ನಕಲಿ ವಾಟ್ಸಾಪ್ ಸೃಷ್ಟಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ವಾಟ್ಸಾಪ್‌ನಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರ ಫೋಟೋವನ್ನೇ ದುರ್ಬಳಕೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಬಳಿಕ ಅನುಪಮ್ ಅಗರ್ವಾಲ್ ಹೆಸರಿನಲ್ಲಿ ಹಲವರಿಗೆ ವಾಟ್ಸಾಪ್ ಸಂದೇಶ ಕಳಿಸಿ, ತಾನು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್. ಆಸ್ಪತ್ರೆಯಲ್ಲಿದ್ದೇನೆ. ಯುಪಿಐ ಕೆಲಸ ಮಾಡುತ್ತಿಲ್ಲ, ಸ್ವಲ್ಪ ಹಣ ಇದ್ದರೆ ಕೊಡಿ, ಒಂದು ಗಂಟೆಯಲ್ಲಿ ವಾಪಾಸ್ ಕೊಡುತ್ತೇನೆ” ಎಂದು ವಾಟ್ಸಾಪ್ ಸಂದೇಶ ಕಳುಹಿಸಿ ಹಣಕ್ಕೆ ಬೇಡಿಕೆ ಇಡಲಾಗಿದೆ. ಮಂಗಳೂರಿನ ಹಲವರಿಗೆ ಕಮಿಷನರ್ ಹೆಸರಿನಲ್ಲಿ ಇದೇ ರೀತಿಯಲ್ಲಿ ಸಂದೇಶ ರವಾನೆಯಾಗಿದೆ. ಮಂಗಳೂರು ಕಮಿಷನರ್ ಅಧಿಕೃತ ವಾಟ್ಸಾಪ್ ಖಾತೆಯ ಫೋಟೋ ಬಳಸಿ ನಕಲಿ ಖಾತೆ ಸೃಷ್ಟಿಸಲಾಗಿದೆ. 8319051976 ಮೊಬೈಲ್ ಸಂಖ್ಯೆಯಲ್ಲಿ ಈ ನಕಲಿ ವಾಟ್ಸಾಪ್ ಖಾತೆ ಸೃಷ್ಟಿಯಾಗಿದೆ. ನಕಲಿ ಖಾತೆ ಸೃಷ್ಟಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಮಿಷನರ್ ಸ್ಪಷ್ಟನೆ ನೀಡಿದ್ದು ಯಾರೂ ಹಣ ನೀಡದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಅಲ್ಲದೆ ಸೈಬರ್ ಕ್ರೈಂಗೆ ಕ್ರಮಕ್ಕೆ ಸೂಚಿಸಿದ್ದಾರೆ.