ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಂದ ಕೋಟಿಗಟ್ಟಲೆ ರೂಪಾಯಿ ದೋಚಿದ ಆರೋಪದ ಮೇಲೆ ಸದ್ಯ ಚೈತ್ರಾ ಕುಂದಾಪುರ ಮತ್ತು ಅವರ ತಂಡ ಪೊಲೀಸರ ಆತಿಥ್ಯದಲ್ಲಿದೆ. ಈ ಮಧ್ಯೆ ಚೈತ್ರಾ ಪೊಲೀಸ್ ಬಲೆಗೆ ಬೀಳುತ್ತಿದ್ದಂತೆ ಮಲೆನಾಡಿನ ಗ್ರಾಮಸ್ಥರು ಹರಕೆ ತೀರಿಸಿದ್ದಾರೆ. ಅದು ಯಾಕೆ ಎನ್ನುವ ಕುತೂಹಲಕಾರಿ ಪ್ರಶ್ನೆಗೆ ಇಲ್ಲಿದೆ ಉತ್ತರ.
ಎಲ್ಲಿ?
ಕೊಪ್ಪ ತಾಲೂಕಿನ ಮಾವಿನಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಕೆಲ ಗ್ರಾಮಸ್ಥರು ವಿಘ್ನೇಶ್ವರ ಮತ್ತು ಬ್ರಹ್ಮ ಜಟಿಕೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದಾರೆ. ಅಲ್ಲದೆ ದೇವಸ್ಥಾನದ ಮುಂದೆ 101 ಈಡುಗಾಯಿ ಹೊಡೆದಿದ್ದಾರೆ. ಜೊತೆಗೆ ಚೈತ್ರಾ ಓಡಾಡಿದ ಜಾಗಕ್ಕೆ ತೀರ್ಥ ಹಾಕಿ ಗ್ರಾಮಸ್ಥರು ಶುದ್ಧ ಮಾಡಿದ್ದಾರೆ.
ಕಾರಣವೇನು?
ವರ್ಷದ ಹಿಂದೆ ಮಾವಿನಕಟ್ಟೆಗೆ ಆಗಮಿಸಿದ್ದ ಚೈತ್ರಾ ಪ್ರಚೋದನಕಾರಿ ಭಾಷಣ ಮಾಡಿದ್ದರು. ಆ ಮೂಲಕ ಗ್ರಾಮದಲ್ಲಿ ಶಾಂತಿ ಕದಡಲು ಕಾರಣರಾಗಿದ್ದಾರೆ ಎನ್ನುವ ಆರೋಪವಿದೆ. ಅಂದು ಚೈತ್ರಾ ರಾಜಕೀಯ ದುರುದ್ದೇಶದಿಂದಲೇ ಭಾಷಣ ಮಾಡಿದ್ದರು ಎನ್ನುವ ದೂರು ಕೇಳಿ ಬಂದಿತ್ತು. ಹೀಗಾಗಿ ಗ್ರಾಮದಲ್ಲಿ ಅಶಾಂತಿ ಮೂಡಿಸುವವರನ್ನು ನೀನೇ ನೋಡಿಕೊಳ್ಳಬೇಕು ಎಂದು ಅಂದು ಗ್ರಾಮಸ್ಥರು ದೇವರಲ್ಲಿ ಪ್ರಾರ್ಥಿಸಿದ್ದರು.
ಯಾವಾಗ?
2022ರ ಅಕ್ಟೋಬರ್ ನಲ್ಲಿ ಗ್ರಾಮದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆದಿತ್ತು. ಆಗ ದಿಕ್ಸೂಚಿ ಭಾಷಣ ಮಾಡಿದ್ದ ಚೈತ್ರಾ ಎರಡು ಕೋಮುಗಳ ನಡುವೆ ಗಲಾಟೆಯಾಗುವಂತಹ ಪ್ರಚೋದನಾಕಾರಿ ಭಾಷಣ ಮಾಡಿದ್ದರು.
ಸದ್ಯ ಬಹುಕೋಟಿ ವಂಚನೆಯ ಆರೋಪದಲ್ಲಿ ಸಿಸಿಬಿ ಪೊಲೀಸರು ಚೈತ್ರಾ ಸೇರಿದಂತೆ ಅವರ ಸಹಚರರನ್ನು ಬಂಧಿಸಿದ್ದಾರೆ. ಪ್ರಾರ್ಥನೆ ಫಲಿಸಿದ ಹಿನ್ನಲೆಯಲ್ಲಿ ಹರಕೆ ತಿರಿಸಲಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.