ಹರ್ಯಾಣ: ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಪೊಲೀಸರ ವಾಹನವನ್ನೇ ಬಳಸಿ ಎಸ್ಕೇಪ್ ಆಗಿರುವ ಘಟನೆ ಹರ್ಯಾಣದಲ್ಲಿ ನಡೆದಿದೆ.
ಕೌಟುಂಬಿಕ ಕಲಹದ ದೂರೊಂದನ್ನು ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ತೆರಳುತ್ತಿದ್ದರು. ಇದೇ ವೇಳೆ ರಸ್ತೆ ಬದಿಯಲ್ಲಿ ಜಗಳವಾಡುತ್ತಿದ್ದ ಗುಂಪನ್ನು ನೋಡಿದ ಪೊಲೀಸರು ಮಧ್ಯಪ್ರವೇಶಿಸಿ, ಘಟನೆಯಲ್ಲಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ಅದೇ ಪೊಲೀಸ್ ಕಾರಿನಲ್ಲಿ ಕರೆದುಕೊಂಡು ಹೋದರು. ಇದಾದ ಬಳಿಕ ಕೌಟುಂಬಿಕ ಕಲಹದ ದೂರು ಬಂದಿದ್ದ ಖುರ್ದಿ ಗ್ರಾಮಕ್ಕೆ ತೆರಳಿದ ಪೊಲೀಸರು ವಾಹನದಿಂದ ಕೆಳಗಿಳಿದು ದೂರು ಬಂದ ಮನೆಯತ್ತ ಹೋಗಿದ್ದಾರೆ. ಆದರೆ ಪೊಲೀಸರು ಈ ವೇಳೆ ವಾಹನದ ಕೀಯನ್ನು ಬಿಟ್ಟು ಹೋಗಿದ್ದಾರೆ. ಪೊಲೀಸರು ಪ್ರಕರಣವನ್ನು ಬಗೆಹರಿಸಲು ಯತ್ನಿಸುತ್ತಿರುವಾಗ ಇತ್ತ ವಾಹನದಲ್ಲಿ ವ್ಯಕ್ತಿ ಪೊಲೀಸ್ ವಾಹನವನ್ನೇ ಬಳಸಿಕೊಂಡು ಅಲ್ಲಿಂದ ಪರಾರಿ ಆಗಿದ್ದಾನೆ.
ಕೂಡಲೇ ಬೈಕ್ನಲ್ಲಿ ಚೇಸ್ ಮಾಡಿದ ಪೊಲೀಸರ ಕಣ್ತಪ್ಪಿಸಿದ ವ್ಯಕ್ತಿ, ಕಾರನ್ನು ಘಟನಾ ಸ್ಥಳದಿಂದ 10 ಕಿ.ಮೀ ದೂರದ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ, ಪರಾರಿಯಾಗಿದ್ದಾನೆ. ಕಾರು ಪತ್ತೆಯಾದರು, ಕಾರಿನ ಕೀ ಕಾಣೆಯಾಗಿದೆ.
ಸ್ಥಳಕ್ಕೆ ಬಂದ ಪೊಲೀಸರು ವಾಹನವನ್ನು ವಶಪಡಿಸಿಕೊಂಡರೂ ಕೂಡ ಅದರ ಕೀ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಶಂಕಿತನ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.