ಪುಣೆ: ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳ ಸಾವಿಗೆ ಕಾರಣವಾದ ಪುಣೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷದ ಬಾಲಕನ ರಕ್ತ ಪರೀಕ್ಷೆ ವರದಿಯನ್ನು ತಿರುಚಿದ ಆರೋಪದಲ್ಲಿ ಪೊಲೀಸರು ಈಗಾಗಲೇ ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ. ಬಂಧಿತರಾದ ಇಬ್ಬರು ವೈದ್ಯರು ಆಸ್ಪತ್ರೆಯ ಸಿಬ್ಬಂದಿಗೆ ಬಾಲಕನ ಅಸಲಿ ರಕ್ತದ ಮಾದರಿಯನ್ನು ಬದಲಾಯಿಸಲು ಬರೋಬ್ಬರಿ ಮೂರು ಲಕ್ಷ ರೂ. ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಕಾರು ಅಪಘಾತ ಮಾಡಿದ ಅಪ್ರಾಪ್ತನ ರಕ್ತದ ಮಾದರಿ ವರದಿ ಬದಲಾಯಿಸಲು ಆತನ ಕುಟುಂಬಸ್ಥರು 3 ಲಕ್ಷ ರೂ. ಲಂಚ ಕೊಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸ್ಫೋಟಕ ವಿಷಯ ಹೊರಬೀಳುತ್ತಿದ್ದಂತೆ ಪುಣೆ ಕ್ರೈಂ ಬ್ರಾಂಚ್ ಅಧಿಕಾರಿಗಳು ಆರೋಪಿ ವೈದ್ಯರಿಂದ ನಗದನ್ನು ವಶಪಡಿಸಿಕೊಂಡಿದ್ದಾರೆ.
ಅತುಲ್ ಘಟಕಾಂಬಳೆ ಎಂಬ ಆಸ್ಪತ್ರೆಯ ಪ್ಯೂನ್ ಮಧ್ಯವರ್ತಿಯಾಗಿ, ಅಪ್ರಾಪ್ತನ ಕುಟುಂಬದಿಂದ ಇಬ್ಬರು ವೈದ್ಯರಿಗೆ 3 ಲಕ್ಷ ರೂ. ಲಂಚವನ್ನು ಸಂಗ್ರಹಿಸಿದ್ದ. ಸಸೂನ್ ಆಸ್ಪತ್ರೆಯ ಡಾ. ಅಜಯ್ ತವಾಡೆ ಮತ್ತು ಡಾ. ಹರಿ ಹಾರ್ನರ್ ಅವರನ್ನು ಪುಣೆ ಕ್ರೈಂ ಬ್ರಾಂಚ್ ನಿನ್ನೆ ಬಂಧಿಸಿದೆ.
ತನಿಖೆಯಿಂದ ಡಾ. ತವಡೆ ಮತ್ತು ಹದಿಹರೆಯದ ಆರೋಪಿಯ ತಂದೆ ಅಪಘಾತದ ದಿನ ಫೋನ್‌ನಲ್ಲಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಒಂದು ವಾರದ ಹಿಂದೆ ಪುಣೆಯಲ್ಲಿ ನಡೆದ ಪೋರ್ಷೆ ಕಾರು ಅಪಘಾತ ಪ್ರಕರಣದಲ್ಲಿ ಬೈಕ್ನಲ್ಲಿದ್ದ ಸಾಫ್ಟ್‌ವೇರ್ ದಂಪತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿದ್ದಲ್ಲದೇ, ಇಬ್ಬರ ಜೀವ ಬಲಿಪಡೆದ ಅಪ್ರಾಪ್ತ ಬಾಲಕನನ್ನು ಸಾರ್ವಜನಿಕರ ಆಕ್ರೋಶದ ಮೇರೆಗೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದರು. ಈ ವೇಳೆ ಬಾಲಕನನ್ನು ರಕ್ತದ ಮಾದರಿ ಪರೀಕ್ಷೆಗೆ ಒಳಪಡಿಸಿದಾಗ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅಪ್ರಾಪ್ತ ಬಾಲಕನ ರಕ್ತದ ಮಾದರಿ ಪರೀಕ್ಷೆಯ ವರದಿಯನ್ನು ಇಬ್ಬರು ವೈದ್ಯರು ಬದಲಾಯಿಸಿರುವುದು ಪತ್ತೆಯಾಗಿದೆ. ಈ ಸಂಬಂಧ ಈಗಾಗಲೇ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.