ಪುಣೆ: ಪೋಶೆ ಕಾರ್ ಡಿಕ್ಕಿಯಾಗಿ ಇಬ್ಬರು ಟೆಕ್ಕಿಗಳು ಮೃತಪಟ್ಟ ಘಟನೆ ಪುಣೆಯಲ್ಲಿ ಇತ್ತೀಚೆಗೆ ನಡೆದಿತ್ತು. ರಿಯಲ್ ಎಸ್ಟೇಟ್ ಉದ್ಯಮಿಯ ಅಪ್ರಾಪ್ತ ಪುತ್ರ ಈ ಕಾರನ್ನು ಚಲಾಯಿಸುತ್ತಿದ್ದ.
ಸದ್ಯ ಆತನ ಮೇಲೆ ಪ್ರಕರಣ ದಾಖಲಾಗಿದೆ. ಆದರೆ ಘಟನೆ ನಡೆದ ವೇಳೆ ಕಾರ್‌ನಲ್ಲಿ ಇದ್ದ ಇನ್ನಿಬ್ಬರು ಅಪ್ರಾಪ್ತರ ಮೇಲೆ ಪ್ರಕರಣ ದಾಖಲಾಗಿಲ್ಲ. ಜೊತೆಗೆ ಅವರು ಮದ್ಯ ಸೇವನೆ ಖಚಿತ ಮಾಡಿಕೊಳ್ಳಲು ಸಂಗ್ರಹಿಸಿದ್ದ ರಕ್ತದ ಮಾದರಿಯನ್ನು ಅದಲು-ಬದಲು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸಸೂನ್ ಜನರಲ್ ಆಸ್ಪತ್ರೆಯಲ್ಲಿ ಅಪ್ರಾಪ್ತ ಆರೋಪಿಯ ರಕ್ತ ವರ್ಗಾವಣೆ ಮಾಡಲಾಗಿದೆ ಎಂಬುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಘಟನೆ ನಡೆದ ವೇಳೆ ಮದ್ಯ ಸೇವನೆ ಮಾಡಿದ್ದರಾ? ಎಂಬುದನ್ನು ಖಚಿತಪಡಿಸಿಕೊಳ್ಳಲು ಮೇ 19 ರಂದು ಅಪ್ರಾಪ್ತ ಆರೋಪಿಗಳ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ಆದ್ರೆ ವೈದ್ಯಕೀಯ ಸಿಬ್ಬಂದಿ ಈ ರಕ್ತದ ಮಾದರಿಯನ್ನು ಆರೋಪಿಗಳ ಸಂಬಂಧಿಕರ ರಕ್ತದ ಮಾದರಿಯೊಂದಿಗೆ ಅದಲು-ಬದಲು ಮಾಡಿದ್ದಾರೆ. ಈ ಮೂಲಕ ಭಾರೀ ಕರ್ತವ್ಯ ಲೋಪ ಎಸಗಿದ್ದಾರೆ ಹಾಗೂ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.