ಜೆರುಸಲೇಂ : ಹಮಾಸ್ ಉಗ್ರರ ಜಾಲವನ್ನು ಧ್ವಂಸಗೊಳಿಸುವ ಉದ್ದೇಶದಿಂದ ಗಾಜಾದಲ್ಲಿ ಇಸ್ರೇಲ್ ಸೇನೆ ವೈಮಾನಿಕ ದಾಳಿಯನ್ನು ಮುಂದುವರೆಸಿದ್ದು, ಇದರ ನಡುವಲ್ಲೇ ದಾಳಿ ಸಂದರ್ಭದಲ್ಲಿ ಪತ್ರಕರ್ತರ ಸುರಕ್ಷತೆ ಖಾತರಿಪಡಿಸಲು ಸಾಧ್ಯವಿಲ್ಲ ಎಂದು ಇಸ್ರೇಲ್ ಸೇನಾಪಡೆ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳಾದ ರಾಯಿಟರ್ಸ್ ಮತ್ತು ಏಜೆನ್ಸ್ ಫ್ರಾನ್ಸ್ ಪ್ರೆಸ್‌ಗೆ ತಿಳಿಸಿದೆ.ಪತ್ರಕರ್ತರ ಸುರಕ್ಷತೆಯನ್ನು ಖಾತರಿಪಡಿಸುವಂತೆ ಈ ಹಿಂದೆ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳಾದ ರಾಯಿಟರ್ಸ್ ಮತ್ತು ಏಜೆನ್ಸ್ ಫ್ರಾನ್ಸ್ ಪ್ರೆಸ್ ಇಸ್ರೇಲ್ ಸೇನಾಪಡೆಗೆ ಮನವಿ ಮಾಡಿಕೊಂಡಿತ್ತು.
ಈ ಮನವಿಗೆ ಪ್ರತಿಕ್ರಿಯೆ ನೀಡಿ ಸುದ್ದಿಸಂಸ್ಥೆಗಳಿಗೆ ಪತ್ರ ಬರೆದಿರುವ ಇಸ್ರೇಲ್ ರಕ್ಷಣಾ ಪಡೆ, ಐಡಿಎಫ್ ಗಾಜಾದಾದ್ಯಂತ ಹಮಾಸ್ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ. ಹಮಾಸ್ ಉಗ್ರರು ಉದ್ದೇಶಪೂರ್ವಕವಾಗಿ ಪತ್ರಕರ್ತರು, ನಾಗರೀಕರಿರುವ ಸ್ಥಳದಲ್ಲಿ ನೆಲೆಯೂರುತ್ತಿದ್ದಾರೆ. ಉಗ್ರರು ಅಡಗಿ ಕುಳಿತಿರುವ ಸ್ಥಳಗಳಲ್ಲಿ ತೀವ್ರ ರೀತಿಯಲ್ಲಿ ದಾಳಿ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಕಟ್ಟಡಗಳಿಗೆ ಹಾನಿಯುಂಟಾಗಬಹುದು. ಹಮಾಸ್ ಉಗ್ರರು ಹಾಸಿರುವ ರಾಕೆಟ್ ಗಳು ಕೂಡ ಪತ್ರಕರ್ತರ ಸಾವಿಗೆ ಕಾರಣವಾಗಬಹುದು. ಹೀಗಾಗಿ ಪತ್ರಕರ್ತರ ಸುರಕ್ಷತೆ ಖಾತರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ ಎಂದು ತಿಳಿದುಬಂದಿದೆ.