ಪ್ರಕಟಣೆಗೆ ತೆರೆ ಎಳೆದ ಮಂಗಳ ವಾರಪತ್ರಿಕೆ

ಬೆಂಗಳೂರು : ಕಾದಂಬರಿಗಳಿಗೆ ಮೀಸಲಾಗಿದ್ದ ಪ್ರಜಾಮತ ಪತ್ರಿಕೆಯ ನಿರ್ಗಮನದ ನಂತರ ಓದುಗರ ಮನಸಲ್ಲಿ ಸ್ಥಾನಗಳಿಸಿದ್ದ ಮಂಗಳವಾರ ಪತ್ರಿಕೆಯು ಈ ವಾರದ ಸಂಚಿಕೆಯೊಂದಿಗೆ ತನ್ನ ಪ್ರಕಟಣೆಗೆ ತೆರೆ ಎಳೆದಿದೆ.

ಆರು ವೈವಿಧ್ಯಮಯ ಕಾದಂಬರಿಗಳು, ಒಂದಕ್ಕಿಂತ ಒಂದು ಭಿನ್ನ.. ಓದುಗರ ಮನಸೂರೆಗೊಂಡು ಪ್ರಕಟಣೆಯ ಅಲ್ಪಾವಧಿಯಲ್ಲಿಯೇ ಓದುಗರ ಮನ ಗೆದ್ದದ್ದು ಇತಿಹಾಸ. ಆರಂಭಿಕ ಸಂಪಾದಕರಾದ ಬಾಬು ಕೃಷ್ಣಮೂರ್ತಿಯವರು ಓದುಗರ ನಾಡಿಮಿಡಿತವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ಅದಕ್ಕೆ ತಕ್ಕಂತೆ ಕಾದಂಬರಿಗಳನ್ನು ಆಯ್ಕೆ ಮಾಡಿಕೊಂಡು ಮಂಗಳಕ್ಕೆ ವಿಶೇಷ ಸ್ಥಾನಮಾನ ದೊರಕಿಸಿ ಕೊಟ್ಟರು. ಒಬ್ಬರಿಗಿಂತ ಒಬ್ಬರು ಜನಪ್ರಿಯ ಕಾದಂಬರಿಕಾರರ ಕಾದಂಬರಿಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು.

ಉಷಾ ನವರತ್ನರಾಮ್, ಸಾಯಿಸುತೆ, ಸಿ.ಎನ್. ಮುಕ್ತಾ, ಬಿ .ಎಲ್. ವೇಣು, ಸುದರ್ಶನ ದೇಸಾಯಿ, ಕೌಂಡಿನ್ಯ.. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

Advertisement

ಬಾಬು ಕೃಷ್ಣಮೂರ್ತಿ ಅವರ ನಂತರ ಸಂಪಾದಕರಾದ, ಬಿ. ಎಂ. ಮಾಣಿಯಾಟ್, ಎನ್. ಎಸ್. ಶ್ರೀಧರ್ಮೂರ್ತಿ, ಎನ್ನೇಬಿ ಮೊಗ್ರಾಲ್ ಪುತ್ತೂರು ಅವರು ಕೂಡ ಮಂಗಳದ ಬೆಳವಣಿಗೆಗೆ ಟೊಂಕ ಕಟ್ಟಿ ನಿಂತವರೇ.

ಮಂಗಳೂರಿನ ಹಂಪನಕಟ್ಟೆಯ ಬೀದಿ ಬದಿಯ ಫುಟ್ಪಾತ್ ಒಂದರಲ್ಲೇ ವಾರಕ್ಕೆ ಸುಮಾರು 10 ಸಾವಿರ ಪ್ರತಿಗಳು ಮಾರಾಟವಾಗುತ್ತಿತ್ತು ಎಂದರೆ ಇದರ ಜನಪ್ರಿಯತೆಯನ್ನು ಊಹಿಸಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದಕ್ಕೆ ಅತ್ಯಧಿಕ ಪ್ರಸಾರಣೆ ಇತ್ತು. ಮಧ್ಯಮ ವರ್ಗದ ಜನರ ಅಭಿರುಚಿಗೆ ಹೇಳಿ ಮಾಡಿಸಿದಂತೆ ಪತ್ರಿಕೆ ರೂಪುಗೊಳ್ಳುತ್ತಿತ್ತು.
ಅನೇಕ ಬರಹಗಾರರಿಗೆ ಇದು ಮೊದಲ ಮೆಟ್ಟಿಲಾದ ಪತ್ರಿಕೆ.‌ ತಿದ್ದಿ ಬರೆಸಿ ಬೆಳೆಸಿದ ಪತ್ರಿಕೆ.

ಬದಲಾಗುತ್ತಿರುವ ಬದುಕಿನ ಶೈಲಿ, ಹೊಸ ಯುವ ಮನಸ್ಸುಗಳ ಅಭಿರುಚಿಗಳಿಗೆ 40 ವರ್ಷಗಳಿಂದ ಓದುಗರ ಒಡನಾಡಿಯಾದ ಪತ್ರಿಕೆ ಪ್ರಕಟಣೆ ನಿಲ್ಲಿಸುತ್ತಿರುವುದು ಒಂದು ಉದಾಹರಣೆಯಷ್ಟೇ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement