ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ (ಬುಧವಾರ) ನವದೆಹಲಿಯ ಪ್ರಗತಿ ಮೈದಾನದಲ್ಲಿ ಅತ್ಯದ್ಭುತ ವಿನ್ಯಾಸಗಳೊಂದಿಗೆ ನಿರ್ವಣಗೊಂಡಿರುವ ಸುಧಾರಿತ ಸಮುಚ್ಚಯ ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ (ಐಟಿಪಿಒ) ಅನ್ನು ಉದ್ಘಾಟಿಸಿದ್ದಾರೆ. ಈ ಬಗ್ಗೆ ಖ್ಯಾತ ಉದ್ಯಮಿ ಆನಂದ ಮಹೀಂದ್ರಾ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಐಟಿಪಿಒ ಸಂಕೀರ್ಣದ ಫೋಟೋಗಳನ್ನು ಟ್ವೀಟ್ ಮಾಡಿರುವ ಆನಂದ ಮಹೀಂದ್ರಾ ಅವರು, ‘ನನ್ನ ವೃತ್ತಿಜೀವನದುದ್ದಕ್ಕೂ ನಾನು ಹಳೆಯ ಪ್ರಗತಿ ಮೈದಾನದ ಸಂಕೀರ್ಣಕ್ಕೆ ಭೇಟಿ ನೀಡಿದ್ದು ನನಗೆ ನೆನಪಿದೆ. ಅದು ಅಂತರರಾಷ್ಟ್ರೀಯ ಸಮ್ಮೇಳನ ಮತ್ತು ಪ್ರದರ್ಶನ ಮೂಲಸೌಕರ್ಯಗಳ ವಿಷಯದಲ್ಲಿ ನಾವು ಎಷ್ಟು ಹಿಂದುಳಿದಿದ್ದೇವೆ ಎಂಬುದನ್ನು ಹೈಲೈಟ್ ಮಾಡುತ್ತಿತ್ತು. ಇದು ಮುಜುಗರಕ್ಕೂ ಕಾರಣವಾಗಿತ್ತು. ಆದರೆ ಈ ಹೊಸ ಕನ್ವೆನ್ಶನ್ ಸೆಂಟರ್ ನಿಖರವಾಗಿ ಸರಿಯಾದ ಸಮಯದಲ್ಲಿ ಬಂದಿದೆ. ವಾಣಿಜ್ಯ ಪ್ರಪಂಚವು ಭಾರತದ ಬಾಗಿಲಿಗೆ ದಾರಿಯನ್ನು ಹುಡುಕಿಕೊಡುವಂತೆ ಐಟಿಪಿಒ ಮಾಡಿದೆ. ಬಹಳ ಹೆಮ್ಮೆಯಿಂದ ಹೊಸ ಸಂಕೀರ್ಣದಲ್ಲಿ ಸಮ್ಮೇಳನಗಳಿಗೆ ಹಾಜರಾಗಲು ನಾನು ಎದುರು ನೋಡುತ್ತಿದ್ದೇನೆ’ ಎಂದು ತಿಳಿಸಿದ್ದಾರೆ. ಪ್ರಗತಿ ಮೈದಾನ ಸಂಕೀರ್ಣ ಎಂದೂ ಕರೆಯಲ್ಪಡುವ ವಿಶಾಲವಾದ ಐಟಿಪಿಒ ಸಂಕೀರ್ಣವು ಸರಿಸುಮಾರು 123 ಎಕರೆಗಳನ್ನು ವ್ಯಾಪಿಸಿದೆ. ಇದು ಭಾರತದ ಅತಿದೊಡ್ಡ ಸಭೆಗಳು, ಪ್ರೋತ್ಸಾಹಕಗಳು, ಸಮ್ಮೇಳನಗಳು ಮತ್ತು ಪ್ರದರ್ಶನಗಳು (MICE) ನಡೆಯುವ ತಾಣವಾಗಿದೆ.