ಬೆಂಗಳೂರು: ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ. ಆತ ತಪ್ಪು ಮಾಡಿರುವುದು ತನಿಖೆಯಲ್ಲಿ ಸಾಬೀತಾದರೆ ಸರ್ಕಾರ ಕ್ರಮ ಜರುಗಿಸಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಚ್.ಡಿ.ರೇವಣ್ಣ ವಿರುದ್ಧದ ಪ್ರಕರಣವನ್ನು ಸೃಷ್ಟಿ ಮಾಡಲಾಗಿದೆ. ಅದರ ಹಿಂದಿರುವವರ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ಒಂದು ಪ್ರಕರಣದಲ್ಲಿ ರೇವಣ್ಣ ಅವರಿಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಮತ್ತೊಂದು ಪ್ರಕರಣದಲ್ಲಿ ಜಾಮೀನು ಅರ್ಜಿಯ ವಿಚಾರಣೆ ಪ್ರಗತಿಯಲ್ಲಿದೆ ಎಂದರು.
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿರುವ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣದಲ್ಲಿ ಹಲವರಿದ್ದಾರೆ. ಎಲ್ಲರಿಗೂ ಶಿಕ್ಷೆ ಆಗಬೇಕು. ಸಂತ್ರಸ್ತ ಮಹಿಳೆಯರಿಗೆ ನ್ಯಾಯ ದೊರಕಬೇಕು. ಈ ಪ್ರಕರಣದ ಹಿಂದೆ ಯಾರಿದ್ದಾರೆ? ಅವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೇವೆ? ಎಂಬುದರ ಬಗ್ಗೆ ಕುಮಾರಸ್ವಾಮಿ ಮಾತನಾಡುತ್ತಾರೆ ಎಂದು ಹೇಳಿದರು.