ಬೆಂಗಳೂರು : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ತುಣುಕುಗಳು ಹರಿದಾಡುತ್ತಿದ್ದು, ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ.
ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವಿಡಿಯೋ ತುಣುಕುಗಳು ಹರಿದಾಡುತ್ತಿದ್ದು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್ ಐ ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಹಿನ್ನಲೆಯಲ್ಲಿ ಸರ್ಕಾರ ವಿಶೇಷ ತನಿಖಾ ತಂಡ ರಚಿಸುವ ತೀರ್ಮಾನ ಕೈಗೊಂಡಿದೆ. ಈ ಮಧ್ಯೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್‌ನಲ್ಲಿ ಮಹಿಳೆಯರ ಮೇಲೆ ನಡೆಸಲಾಗುತ್ತಿರುವ ಲೈಂಗಿಕ ಹಿಂಸೆಯ ಕುರಿತು ಮತ್ತು ಸಾವಿರಾರು ಅಮಾಯಕ ಹೆಣ್ಣು ಮಕ್ಕಳನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡು, ಮೊಬೈಲ್‌ನಲ್ಲಿ ಖಾಸಗಿ ವಿಡಿಯೋವನ್ನು ಚಿತ್ರೀಕರಿಸಿಕೊಂಡು, ಬ್ಲಾಕ್ ಮೇಲ್ ಮಾಡುತ್ತಿರುವುದಾಗಿ ಸಮೂಹ ಮಾಧ್ಯಮಗಳಲ್ಲಿ ಪ್ರಚಾರವಾಗಿರುತ್ತದೆ. ಅಲ್ಲದೇ ಪ್ರಭಾವಿ ರಾಜಕಾರಣಿಗಳು ಅನೇಕ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ, ಕೆಲವರ ಮೇಲೆ ಅತ್ಯಾಚಾರ ಸಹ ಮಾಡುತ್ತಿರುವ ತುಣುಕುಗಳಿರುವ ಪೆನ್‌ಡ್ರೈವ್‌ಗಳು ಈಗ ಜನ ಸಾಮಾನ್ಯರ ಕೈಗೆ ಸಿಕ್ಕಿ, ಇಡೀ ಸಮಾಜ ತಲೆ ತಗ್ಗಿಸುವ ಸ್ಥಿತಿ ಏರ್ಪಟ್ಟಿದ್ದು, ಮಹಿಳೆಯರ ಬದುಕು ಹಾಗೂ ಘನತೆಯನ್ನು ನಾಶ ಮಾಡುತ್ತಿರುವ ಬಗ್ಗೆ ಸಮೂಹ ಮಾಧ್ಯಮಗಳಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗದಲ್ಲೂ ಸಹ ಈ ವಿಷಯಕ್ಕೆ ಸಂಬಂಧಿಸಿದಂತೆ, ಹಲವಾರು ಸಂಘಟನೆಗಳಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಗಳು ಸ್ವೀಕೃತಗೊಂಡಿರುತ್ತದೆ.
ಹಾಸನ ಜಿಲ್ಲೆಯಲ್ಲಿ ಪೆನ್‌ಡ್ರೈವ್ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಹಲವು ಪತ್ರಿಕಾ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಹಲವು ಮಹಿಳೆಯರನ್ನು ಬಲವಂತದಿಂದ ಲೈಂಗಿಕ ಕ್ರಿಯೆಗೆ ಒತ್ತಾಯಪಡಿಸುವ ಮೂಲಕ ಚಿತ್ರೀಕರಿಸಲಾಗಿದೆ ಎನ್ನಲಾಗುತ್ತಿದ್ದು, ಚಿತ್ರೀಕರಣ ಮಾಡಿದ ವ್ಯಕ್ತಿ ಮತ್ತು ಅದನ್ನು ಸಾರ್ವಜನಿಕಗೊಳಿಸಿದ ವ್ಯಕ್ತಿಯನ್ನು ತನಿಖೆಗೆ ಒಳಪಡಿಸುವ ಮೂಲಕ ಮಹಿಳೆಯರ ಘನತೆ ಹಾಗೂ ಅಸ್ತಿತ್ವಕ್ಕೆ ಹಾನಿ ಉಂಟು ಮಾಡುತ್ತಿರುವವರನ್ನು ಶೀಘ್ರವಾಗಿ ಪತ್ತೆಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸಲು ಆದೇಶ ನೀಡಬೇಕು ಮತ್ತು ಆರೋಪಿಗಳ ವಿರುದ್ಧ ಕಠಿಣ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಆದೇಶ ನೀಡುವಂತೆ ಸಿಎಂ ಸಿದ್ದರಾಮಯ್ಯರನ್ನು ಕೋರಿದ್ದಾರೆ.