ಬೆಂಗಳೂರು: ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪುರುಷತ್ವ ಪರೀಕ್ಷೆಯ ವರದಿಯು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಕೈ ಸೇರಿದ್ದು, ಮಹಿಳೆಯರೊಂದಿಗೆ ಲೈಂಗಿಕ ಸಂಪರ್ಕ ಸಾಧಿಸಲು ಅವರು ಸಮರ್ಥರಿದ್ದಾರೆ ಎಂಬ ಅಂಶ ದೃಢಪಟ್ಟಿದೆ. ಕೆಲವು ದಿನಗಳ ಹಿಂದೆ ಬೌರಿಂಗ್ ಆಸ್ಪತ್ರೆಯಲ್ಲಿ ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಎಸ್‌ಐಟಿ ಅಧಿಕಾರಿಗಳು ಪದೇ ಪದೇ ಪುರುಷತ್ವ ಪರೀಕ್ಷೆಗೆ ಒಳಪಡಿಸುತ್ತಿರುವುದರಿಂದ ಮುಜುಗರವಾಗುತ್ತದೆ ಎಂದು ಈ ಹಿಂದೆ ನ್ಯಾಯಾಲಯದ ಮುಂದೆ ಪ್ರಜ್ವಲ್ ಅಳಲು ತೋಡಿಕೊಂಡಿದ್ದರು. ಧ್ವನಿ ಪರೀಕ್ಷೆ ಹಾಗೂ ಇನ್ನಿತರ ಪರೀಕ್ಷೆಗಳ ವರದಿ ಎಫ್‌ಎಸ್‌ಎಲ್‌ನಿಂದ ಬರಬೇಕಿದೆ. ಈ ವರದಿಗಳು ಪೂರಕವಾಗಿದ್ದರೆ ಅವುಗಳು ಕೂಡ ಪ್ರಜ್ವಲ್ ವಿರುದ್ಧದ ಪ್ರಬಲ ಸಾಕ್ಷ್ಯಗಳಾಗಲಿವೆ. ಪ್ರಜ್ವಲ್ ರೇವಣ್ಣ ಸಾಕಷ್ಟು ಮಹಿಳೆಯರಿಗೆ ಬೆದರಿಕೆ ಹಾಕಿ ಬಲವಂತವಾಗಿ ಅಸುರಕ್ಷಿತ ಲೈಂಗಿಕ ಸಂಪರ್ಕ ನಡೆಸುತ್ತಿದ್ದ. ಇದರಿಂದಾ ಪ್ರಜ್ವಲ್ ತನಗೆ ಎಚ್‌ಐವಿ ಬರಬಹುದು ಎಂಬ ಆತಂಕದಿಂದಲೇ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಎಚ್‌ಐವಿ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದರು ಎಂಬ ಸಂಗತಿ ಇದೀಗ ಬಯಲಾಗಿದೆ.
