ಬೆಂಗಳೂರು:ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರ ಪ್ರತ್ಯೇಕ ದೇಶದ ಬೇಡಿಕೆಯನ್ನು ಖಂಡಿಸಿ ಇಂದು ಬಿಜೆಪಿ ಯುವಮೋರ್ಚಾ ವತಿಯಿಂದ ತೀವ್ರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನಡೆಸಿ ಡಿ.ಕೆ.ಸುರೇಶ್ ಅವರ ಸದಾಶಿವನಗರದ ಮನೆಗೆ ಮುತ್ತಿಗೆ ಹಾಕಲು ಮುಂದಾಗಿದ್ದು, ಕಾರ್ಯಕರ್ತರನ್ನು ಪೊಲೀಸರು ತಡೆದರು. ಅಲ್ಲದೆ ಲಾಠಿ ಪ್ರಹಾರ ನಡೆಸಿದರು. ಬಳಿಕ ಕಾರ್ಯಕರ್ತರನ್ನು ಬಂಧಿಸಲಾಯಿತು.
ಕಾರ್ಯಕರ್ತರು ವಂದೇ ಮಾತರಂ, ಭಾರತ್ ಮಾತಾ ಕೀ ಜೈ, ಧಿಕ್ಕಾರ ಧಿಕ್ಕಾರ ಡಿ.ಕೆ.ಸುರೇಶ್ ಗೆ ಧಿಕ್ಕಾರ ಮೊದಲಾದ ಘೋಷಣೆಗಳನ್ನು ಕೂಗಿದರು.
ಕೇಂದ್ರ ಬಜೆಟ್ ಮಂಡನೆಯ ಬಳಿಕ ಡಿ.ಕೆ.ಸುರೇಶ್ ಅವರು ದಕ್ಷಿಣ ಭಾರತಕ್ಕೆ ಪ್ರತ್ಯೇಕ ದೇಶದ ಬಗ್ಗೆ ಪ್ರಸ್ತಾಪ ಮಂಡಿಸಿದ್ದು, ಇದು ಆಕ್ಷೇಪಾರ್ಹ. ಇದನ್ನು ಖಂಡಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಯುವ ಮೋರ್ಚಾ ಮುಖಂಡರು ತಿಳಿಸಿದರು.
ಪ್ರತಿಭಟನಾನಿರತ ಕಾರ್ಯಕರ್ತರ ಮೇಲೆ ಪೊಲೀಸರ ತೀವ್ರ ಹಲ್ಲೆಯನ್ನು ಬಿಜೆಪಿ ಖಂಡಿಸಿದೆ. ಸಂವಿಧಾನ ವಿರೋಧಿ, ರಾಷ್ಟ್ರವನ್ನು ಒಡೆಯುವಂಥ ಹೇಳಿಕೆಯನ್ನು ಕೊಟ್ಟಂಥ ವ್ಯಕ್ತಿ ಸುರಕ್ಷಿತವಾಗಿರುತ್ತಾರೆ. ಆದರೆ, ರಾಷ್ಟ್ರದ ಏಕತೆಗೆ, ಸಮಗ್ರತೆಗೆ ನಿಮ್ಮ ಹೇಳಿಕೆ ಧಕ್ಕೆ ಉಂಟು ಮಾಡುತ್ತದೆ ಎನ್ನುವ ಹಾಗೂ ಶಾಂತಿಯುವ ಪ್ರತಿಭಟನೆ ಮಾಡಲು ಹೋದವರ ಮೇಲೆ ಲಾಠಿಚಾರ್ಜ್ ಮಾಡಿದ್ದಲ್ಲದೆ ಪೊಲೀಸರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಖಂಡಿಸಿದ್ದಾರೆ.