ಬೆಂಗಳೂರು: ಸರ್ಕಾರದ ವಿವಿಧ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವಾಗ ಮೀಸಲಾತಿ ಜಾರಿ ಮಾಡುವ ಮಹತ್ವದ ತೀರ್ಮಾನವನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆ ತೆಗೆದುಕೊಂಡಿದೆ. ಹೌದು ಮೊಟ್ಟ ಮೊದಲ ಬಾರಿಗೆ ಹೊರಗುತ್ತಿಗೆಯಲ್ಲಿ ಮೀಸಲಾತಿ ಜಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ ಹಾಗೂ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅವಶ್ಯವಿರುವ 347 ಗ್ರೂಪ್ ಡಿ ನೌಕರರು ಮತ್ತು 102 ಡೇಟಾ ಆಪರೇಟರ್ ಗಳು ಸೇರಿದಂತೆ ಒಟ್ಟು 449 ಹುದ್ದೆಗಳ ಸೇವೆಯನ್ನು ರೂ.11 ಕೋಟಿ ವೆಚ್ಚದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಪಡೆಯಲು ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ರೋಸ್ಟರ್ ಅನ್ವಯವೇ ನೇಮಕ ಮಾಡಲಾಗುವುದು. ಇದರಲ್ಲಿ ಹೈದರಾಬಾದ್ ಕಲ್ಯಾಣ ಮೀಸಲಾತಿಯೂ ಸೇರಿದೆ. ಈ ಹಿಂದೆ ಸರ್ಕಾರಿ ಹುದ್ದೆಗಳ ಹೊರಗುತ್ತಿಗೆಯಲ್ಲಿ ಮೀಸಲಾತಿ ಇರಲಿಲ್ಲ. ಹೊರಗುತ್ತಿಗೆಯಲ್ಲೂ ಮೀಸಲಾತಿ ನೀಡಬೇಕು ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಘಟನೆಗಳು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದವು.