ನವದೆಹಲಿ: ನೀಟ್, ನೆಟ್ ಪರೀಕ್ಷೆಗಳಲ್ಲಿ ಅಕ್ರಮದ ಆರೋಪ ಕೇಳಿ ಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಸಾರ್ವಜನಿಕ ಹಾಗೂ ಸಾಮಾನ್ಯ ಪ್ರವೇಶಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಅಕ್ರಮಗಳನ್ನು ತಡೆಯುವುದಕ್ಕಾಗಿ ಸಾರ್ವಜನಿಕ ಪರೀಕ್ಷೆ 2024ಕ್ಕೆ ಅಧಿಸೂಚನೆ ಹೊರಡಿಸಿದೆ. ತಪ್ಪಿತಸ್ಥರಿಗೆ ಕನಿಷ್ಠ 3ರಿಂದ 5 ವರ್ಷ ಜೈಲು ಶಿಕ್ಷೆ, 10 ಲಕ್ಷ ರೂ. ದಂಡವನ್ನು ಈ ಕಾಯ್ದೆಯು ಹೊಂದಿದೆ. ಯಾವುದೇ ವ್ಯಕ್ತಿ, ಗುಂಪು, ಸಂಸ್ಥೆ, ಪರೀಕ್ಷಾ ಅಧಿಕಾರಿಗಳು ಕೃತ್ಯವೆಸಗಿದಲ್ಲಿ ಕನಿಷ್ಠ 5-10 ವರ್ಷ ಜೈಲು, 1 ಕೋಟಿ ರೂ. ದಂಡ ವಿಧಿಸಲಾಗುತ್ತದೆ. ಕಾಯ್ದೆಯಲ್ಲಿ ಯುಪಿಎಸ್‌ಸಿ, ಎಸ್‌ಎಸ್‌ಸಿ, ರೈಲ್ವೇ, ಬ್ಯಾಂಕಿಂಗ್, ಎನ್‌ಟಿಎ ನಡೆಸುವ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು ಒಳಗೊಂಡಿವೆ.
